ಪಾರ್ಲ್, ದಕ್ಷಿಣ ಆಫ್ರಿಕಾ: ಸಂಜು ಸ್ಯಾಮ್ಸನ್ ಶತಕ ಮತ್ತು ಅರ್ಷದೀಪ್ ಸಿಂಗ್ ಅವರ ಅಮೋಘ ಬೌಲಿಂಗ್ ಬಲದಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಜಯಿಸಿತು.
ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ 78 ರನ್‌ಗಳಿಂದ ಜಯಿಸಿದ ಕೆ.ಎಲ್. ರಾಹುಲ್ ಬಳಗವು 2–1ರಿಂದ ಸರಣಿ ಗೆದ್ದುಕೊಂಡಿತು.
ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಂಜು (108; 114ಎ, 4X6, 6X3) ಚೆಂದದ ಶತಕ ದಾಖಲಿಸಿದರು. ಅವರು ಮತ್ತು ತಿಲಕ್ ವರ್ಮಾ (52; 77ಎ, 4X5, 6X1) ಜೊತೆಯಾಟದ ಬಲದಿಂದ ಭಾರತ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 296 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಆತಿಥೇಯ ತಂಡಕ್ಕೆ 45.5 ಓವರ್‌ಗಳಲ್ಲಿ 218 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಎಡಗೈ ವೇಗಿ ಅರ್ಷದೀಪ್ ಸಿಂಗ್ (30ಕ್ಕೆ4) ಅವರ ದಾಳಿ ರಂಗೇರಿತು. ಅವರಿಗೆ ಆವೇಶ್ ಖಾನ್ (45ಕ್ಕೆ2) ಮತ್ತು ವಾಷಿಂಗ್ಟನ್ ಸುಂದರ್ (38ಕ್ಕೆ2) ಉತ್ತಮ ಜೊತೆ ನೀಡಿದರು.
ಆತಿಥೇಯ ತಂಡಕ್ಕೆ ರೀಜಾ ಹೆನ್ರಿಕ್ಸ್ (19, 24ಎ) ಮತ್ತು ಟೋನಿ ಡಿ ಝಾರ್ಜಿ (81; 87ಎ, 4X6, 6X3) ಮೊದಲ ವಿಕೆಟ್‌ಗೆ 59 ರನ್ ಸೇರಿಸಿದ ಉತ್ತಮ ಆರಂಭ ನೀಡಿದರು. ಆದರೆ ಈ ಅಡಿಪಾಯದ ಮೇಲೆ ಗೆಲುವಿನ ಸೌಧ ಕಟ್ಟಲು ಉಳಿದ ಬ್ಯಾಟರ್‌ಗಳಿಗೆ ಭಾರತದ ಬೌಲಿಂಗ್ ಪಡೆ ಬಿಡಲಿಲ್ಲ.
ಇಬ್ಬರೂ ಆರಂಭಿಕ ಬ್ಯಾಟರ್‌ಗಳ ವಿಕೆಟ್ ಗಳಿಸಿದ ಆರ್ಷದೀಪ್ ಭಾರತದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು. ಇನ್ನೊಂದೆಡೆ ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಪರಿಣಾಮಕಾರಿ ದಾಳಿ ನಡೆಸಿ, ಜೊತೆಯಾಟಗಳು ಕುದುರದಂತೆ ನೋಡಿಕೊಂಡರು.
ಋತುರಾಜ್ ಗಾಯಕವಾಡ್ ವಿಶ್ರಾಂತಿ ಪಡೆದ ಕಾರಣ ಸಾಯಿ ಸುದರ್ಶನ್ ಜೊತೆಗೆ ರಜತ್ ಪಾಟೀದಾರ್ ಇನಿಂಗ್ಸ್ ಆರಂಭಿಸಿದರು. ಆದರೆ ಎಂಟು ಓವರ್‌ಗಳಾಗುವಷ್ಟರಲ್ಲಿ ಇಬ್ಬರೂ ಔಟಾದರು. ಆಗ ತಂಡದ ಮೊತ್ತ ಕೇವಲ 49 ರನ್‌ಗಳಾಗಿದ್ದವು.
ಕ್ರೀಸ್‌ನಲ್ಲಿದ್ದ ಸಂಜು ಶಾಂತಚಿತ್ತ ರಾಗಿ ಇನಿಂಗ್ಸ್ ಕಟ್ಟುವತ್ತ ಮಗ್ನರಾದರು. ಅವರೊಂದಿಗೆ ಸೇರಿಕೊಂಡ ನಾಯಕ ಕೆ.ಎಲ್. ರಾಹುಲ್ (21; 35ಎ) ಉತ್ತಮ ಜೊತೆ ನೀಡಿದರು. ಇವರಿಬ್ಬರೂ ಮೂರನೇ ವಿಕೆಟ್ ಜೊತೆಯಾಟದಲ್ಲಿ 52 ರನ್ ಸೇರಿಸಿದರು. 19ನೇ ಓವರ್‌ನಲ್ಲಿ ವಿಯಾನ್ ಮುಲ್ದರ್ ಬೌಲಿಂಗ್‌ನಲ್ಲಿ ರಾಹುಲ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು.
ಸಂಜು ಜೊತೆಗೆ ಸೇರಿಕೊಂಡ ತಿಲಕ್ ವರ್ಮಾ ಇನಿಂಗ್ಸ್‌ಗೆ ಬಲ ತುಂಬಿದರು. ಇವರಿಬ್ಬರ ಶತಕದ ಜೊತೆಯಾಟದಿಂದಾಗಿ ಹೋರಾಟದ ಮೊತ್ತ ಪೇರಿಸಲು ಸಾಧ್ಯವಾಯಿತು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 116 ರನ್ ಸೇರಿಸಿದರು.
ಸಂಜು ಶತಕ ಪೂರೈಸಿದರು. ಇನಿಂಗ್ಸ್‌ನಲ್ಲಿ ಇನ್ನೂ ಎಂಟು ಓವರ್‌ಗಳು ಬಾಕಿಯಿದ್ದ ಸಂದರ್ಭದಲ್ಲಿ ಕೇಶವ್ ಮಹಾರಾಜ್ ಎಸೆತದಲ್ಲಿ ವರ್ಮಾ ಔಟಾದರು. ಕ್ರೀಸ್‌ಗೆ ಬಂದ ರಿಂಕು ಸಿಂಗ್ 27 ಎಸೆತದಲ್ಲಿ 38 ರನ್ ಗಳಿಸಿದರು. ಎರಡು ಅಮೋಘ ಸಿಕ್ಸರ್ ಸಿಡಿಸಿ ಪ್ರೇಕ್ಷಕರನ್ನು ರಂಜಿಸಿದರು. ಇದರಿಂದಾಗಿ ತಂಡದ ಮೊತ್ತವೂ ಏರಿಕೆ ಕಂಡಿತು.
ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 296 (ರಜತ್ ಪಾಟೀದಾರ್ 22, ಸಂಜು ಸ್ಯಾಮ್ಸನ್ 108, ಕೆ.ಎಲ್. ರಾಹುಲ್ 21, ತಿಲಕ್ ವರ್ಮಾ 52, ರಿಂಕು ಸಿಂಗ್ 38, ನಾಂದ್ರೆ ಬರ್ಗರ್ 64ಕ್ಕೆ2, ಬೆರನ್ ಹೆನ್ರಿಕ್ಸ್ 63ಕ್ಕೆ3)
ದಕ್ಷಿಣ ಆಫ್ರಿಕಾ: 45.5 ಓವರ್‌ಗಳಲ್ಲಿ 218 (ಟೋನಿ ಡಿ ಝಾರ್ಜಿ 81, ಏಡನ್ ಮರ್ಕರಂ 36, ಹೆನ್ರಿಚ್ ಕ್ಲಾಸೆನ್ 21, ಅರ್ಷದೀಪ್ ಸಿಂಗ್ 30ಕ್ಕೆ4, ಆವೇಶ್ ಖಾನ್ 45ಕ್ಕೆ2, ವಾಷಿಂಗ್ಟನ್ ಸುಂದರ್ 38ಕ್ಕೆ2) ಫಲಿತಾಂಶ: ಭಾರತಕ್ಕೆ 78 ರನ್‌ಗಳ ಜಯ. 2–1ರಿಂದ ಸರಣಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.