ಚೆನ್ನೈ: ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹಮಾಲೀಕರಾಗಿರುವ ಪಂಜಾಬ್ ಕಿಂಗ್ಸ್ ತಂಡದಲ್ಲಿ ಈಗ ಶಾರೂಕ್ ಖಾನ್ ಪ್ರವೇಶಿಸಿದ್ದಾರೆ.
ಆದರೆ ಇವರು ಬಾಲಿವುಡ್ ತಾರೆಯಲ್ಲ. ತಮಿಳುನಾಡಿನ ಕ್ರಿಕೆಟಿಗ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ ಶಾರೂಕ್ ಖಾನ್ ಗುರುವಾರ ಐಪಿಎಲ್ ಆಟಗಾರರ ಹರಾಜಿನಲ್ಲಿ ₹ 5.25 ಕೋಟಿ ಮೌಲ್ಯ ಗಿಟ್ಟಿಸಿದ್ದಾರೆ.
ಈಚೆಗೆ ಮುಷ್ತಾಕ್ ಅಲಿ ಟ್ರೋಫಿಯನ್ನು ತಮಿಳುನಾಡು ಜಯಿಸಲು ಶಾರೂಕ್ ಆಟವೂ ಪ್ರಮುಖವಾಗಿತ್ತು.
ಬಾಲ್ಯದಿಂದಲೇ ಕ್ರಿಕೆಟಿಗನಾಗುವ ಅವರ ಆಸೆಗೆ ತಂದೆ ಮಸೂದ್ ಮತ್ತು ತಾಯಿ ಲುಬ್ನಾ ಅವರ ಬೆಂಬಲ ಲಭಿಸಿತು. ಚರ್ಮೋತ್ಪನ್ನಗಳ ಉದ್ಯಮಿಯಾಗಿರುವ ಮಸೂದ್ ಕ್ಲಬ್ ಕ್ರಿಕೆಟಿಗನಾಗಿದ್ದವರು. ಇದೀಗ ಅವರ ಮನೆಯಲ್ಲಿ ಸಂತಸ ಹೊನಲಾಗಿದೆ.
’ಬಿಡ್ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ತಂಡದ ಬಸ್‌ನಲ್ಲಿದ್ದೆವು. ನನ್ನ ಹೆಸರು ಬಂದಾಗ ಒತ್ತಡದ ಅನುಭವ ಆಗಲಿಲ್ಲ. ಆದರೆ ಆ ಕ್ಷಣವನ್ನು ಮನದುಂಬಿ ಆನಂದಿಸಿದೆ. ನಮ್ಮ ತಂಡದ ನಾಯಕ ದಿನೇಶ್ ಕಾರ್ತಿಕ್ ಮತ್ತು ಸಹ ಆಟಗಾರರೆಲ್ಲರೂ ಸಂಭ್ರಮಿಸಿದರು. ಎಲ್ಲರೂ ಅಭಿನಂದಿಸಿದರು‘ ಎಂದು ಶಾರೂಕ್ ಹೇಳಿದರು.
ಅವರು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಲಿರುವ ತಮಿಳುನಾಡು ತಂಡದಲ್ಲಿದ್ದಾರೆ. ಪಂದ್ಯಗಳು ನಡೆಯಲಿರುವ ಇಂದೋರ್‌ನಲ್ಲಿ ಅವರಿದ್ದಾರೆ.
ಹೋದ ವರ್ಷದ ಹರಾಜಿನಲ್ಲಿ ಶಾರೂಕ್ ಅವರನ್ನು ಯಾವ ತಂಡವೂ ಸೇರ್ಪಡೆ ಮಾಡಿಕೊಂಡಿರಲಿಲ್ಲ.
’ಬಾಲ್ಯದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದೆ. ಶಾಲೆ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದೆ. ಡಾನ್ ಬಾಸ್ಕೋ ಮತ್ತು ಸೇಂಟ್ ಬಿಡ್‌ಸ್ ಶಾಲೆಗಳಲ್ಲಿ ಓದಿದ್ದೆ. ರಾಜ್ಯ ವಯೋಮಿತಿ ತಂಡದಲ್ಲಿ ಅವಕಾಶ ಸಿಕ್ಕಾಗ ಚೆನ್ನಾಗಿ ಆಡಿದೆ. ಅದು ನನ್ನ ಭವಿಷ್ಯ ರೂಪಿಸಿತು‘ ಎಂದು 25 ವರ್ಷದ ಶಾರೂಕ್ ಹೇಳಿದರು.
ಚೆನ್ನೈನ ಕಿಲ್ಪಾಕ್ ನಿವಾಸಿಯಾಗಿರುವ ಆಲ್‌ರೌಂಡರ್ ಶಾರೂಕ್, ಪಂಜಾಬ್ ತಂಡದಲ್ಲಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ಕೆ.ಎಲ್. ರಾಹುಲ್ ಅವರೊಂದಿಗೆ ಆಡುವ ಅವಕಾಶ ಪಡೆದಿದ್ದಾರೆ. ತಮಿಳುನಾಡಿನ ಎಂ. ಅಶ್ವಿನ್ ಕೂಡ ಪಂಜಾಬ್ ತಂಡದಲ್ಲಿದ್ದಾರೆ.
ತಮಿಳುನಾಡಿನ ಸಿ. ಹರಿನಿಶಾಂತ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.