ದುಬೈ: ‘ಹೆಲಿಕಾಫ್ಟರ್ ಶಾಟ್’ ಖ್ಯಾತಿಯ ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಅವರು ಭಾರತದ ವಾಯುಸೇನೆಗೆ ಈಚೆಗೆ ಸೇರ್ಪಡೆಯಾದ ರಫೇಲ್ ಜೆಟ್ ವಿಮಾನಗಳಿಗೆ ಮನಸೋತಿದ್ದಾರೆ.
‘ಈ ಲೋಹದ ಹಕ್ಕಿಗಳು ಬಹಳ ಉತ್ಕೃಷ್ಠವಾಗಿವೆ. ಭಾರತೀಯ ವಾಯುಸೇನೆಯ ಪೈಲಟ್‌ಗಳಿಗೆ ಸಿಕ್ಕಿರುವ ಅಮೋಘವಾದ ಆಯುಧಗಳಾಗಿವೆ’ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಟ್ವೀಟ್ ಮಾಡಿದ್ದಾರೆ.
ಗುರುವಾರ ಅಂಬಾಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫ್ರಾನ್ಸ್ ನಿರ್ಮಿತ ಯುದ್ಧವಿಮಾನಗಳನ್ನು ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು.
ಭಾರತೀಯ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಕೂಡ ಆಗಿರುವ ಧೋನಿ, ‘ರಫೇಲ್ ಫೈಟರ್ ಜೆಟ್‌ಗಳು ವಿಶ್ವದ ಅತ್ಯುತ್ತಮ ವಿಮಾನಗಳಾಗಿವೆ. ಈ ಮೊದಲು ವಾಯುಸೇನೆಯಲ್ಲಿರುವ ಬೇರೆ ಬೇರೆ ವಿಮಾನಗಳು ಮತ್ತು ಅಸ್ತ್ರಗಳೊಂದಿಗೆ ರಫೇಲ್ ಸೇರಿರುವುದು ಬಲ ದುಪಟ್ಟಾಗಿದೆ’ ಎಂದಿದ್ದಾರೆ.
‘ರಫೇಲ್‌ಗಳನ್ನು ಸೇರ್ಪಡೆ ಮಾಡಿಕೊಂಡ 17 ಸ್ಕ್ವಾಡ್ರನ್ (ಗೋಲ್ಡನ್ ಆ್ಯರೋಸ್) ದಳಕ್ಕೆ ಅಭಿನಂದನೆಗಳು. ಇನ್ನು ಮುಂದೆ ಈ ಯೋಧರ ದಿಟ್ಟತನ ಮತ್ತಷ್ಟು ಪ್ರಜ್ವಲಿಸಲಿದೆ. ಎದುರಾಳಿಗಳಿಗೆ ಇವರು ಸಿಂಹಸ್ವಪ್ನರಾಗಲಿದ್ದಾರೆ’ ಎಂದು ಬರೆದಿದ್ದಾರೆ.
39 ವರ್ಷದ ಧೋನಿ ಈಚೆಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಸದ್ಯ ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಆಡಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ದುಬೈನಲ್ಲಿದ್ದಾರೆ.
19ರಂದು ನಡೆಯಲಿರುವ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಚೆನ್ನೈ ತಂಡವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.