ADVERTISEMENT

ಟೆಸ್ಟ್‌ ಕ್ರಿಕೆಟ್: ಕೇನ್‌ ವಿಲಿಯಮ್ಸನ್‌ ದ್ವಿಶತಕ, ನ್ಯೂಜಿಲೆಂಡ್‌ ಬಿಗಿಹಿಡಿತ

ರಾಯಿಟರ್ಸ್
Published 29 ಡಿಸೆಂಬರ್ 2022, 15:59 IST
Last Updated 29 ಡಿಸೆಂಬರ್ 2022, 15:59 IST
ದ್ವಿಶತಕ ಗಳಿಸಿದ ಕೇನ್‌ ವಿಲಿಯಮ್ಸನ್‌ ಸಂಭ್ರಮ –ಎಎಫ್‌ಪಿ ಚಿತ್ರ
ದ್ವಿಶತಕ ಗಳಿಸಿದ ಕೇನ್‌ ವಿಲಿಯಮ್ಸನ್‌ ಸಂಭ್ರಮ –ಎಎಫ್‌ಪಿ ಚಿತ್ರ   

ಕರಾಚಿ: ಕೇನ್‌ ವಿಲಿಯಮ್ಸನ್‌ ಅವರ ಅಜೇಯ ದ್ವಿಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ, ಪಾಕಿಸ್ತಾನ ವಿರುದ್ಧದ ಮೊದಲ ಕ್ರಿಕೆಟ್‌ ಟೆಸ್ಟ್‌ನಲ್ಲಿ ತನ್ನ ಹಿಡಿತ ಬಿಗಿಗೊಳಿಸಿದೆ.

ಕರಾಚಿ ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಪ್ರವಾಸಿ ತಂಡ 9 ವಿಕೆಟ್‌ಗಳಿಗೆ 612 ರನ್‌ ಗಳಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

174 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿರುವ ಬಾಬರ್‌ ಅಜಂ ಬಳಗ ಗುರುವಾರದ ಆಟದ ಅಂತ್ಯಕ್ಕೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 77 ರನ್‌ ಗಳಿಸಿದೆ. ಪಾಕಿಸ್ತಾನ ಇನ್ನೂ 97 ರನ್‌ಗಳ ಹಿನ್ನಡೆಯಲ್ಲಿದ್ದು, ಅಂತಿಮ ದಿನದಾಟ ಕುತೂಹಲ ಮೂಡಿಸಿದೆ.

ADVERTISEMENT

ವಿಲಿಯಮ್ಸನ್‌ ದ್ವಿಶತಕ: 105 ರನ್‌ಗಳೊಂದಿಗೆ ಗುರುವಾರ ಆಟ ಮುಂದುವರಿಸಿದ ವಿಲಿಯಮ್ಸನ್‌ ದ್ವಿಶತಕ ಪೂರೈಸಿದರು. 395 ಎಸೆತಗಳನ್ನು ಎದುರಿಸಿದ ಅವರು 21 ಬೌಂಡರಿ ಹಾಗೂ ಒಂದು ಸಿಕ್ಸರ್ ಹೊಡೆದರು. ಅವರು ಇಶ್‌ ಸೋಧಿ (65) ಜೊತೆ ಏಳನೇ ವಿಕೆಟ್‌ಗೆ 159 ರನ್‌ ಸೇರಿಸಿ ಪಾಕ್‌ ಬೌಲರ್‌ಗಳನ್ನು ಕಾಡಿದರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಪಾಕಿಸ್ತಾನ 130.5 ಓವರ್‌ಗಳಲ್ಲಿ 438. ನ್ಯೂಜಿಲೆಂಡ್‌ 194.5 ಓವರ್‌ಗಳಲ್ಲಿ 9 ವಿಕೆಟ್‌ಗೆ 612 ಡಿ‌ಕ್ಲೇರ್ಡ್‌ (ಕೇನ್‌ ವಿಲಿಯಮ್ಸನ್‌ ಔಟಾಗದೆ 200, ಇಶ್‌ ಸೋಧಿ 65, ಅಬ್ರಾರ್‌ ಅಹ್ಮದ್ 205ಕ್ಕೆ 5, ನೌಮಾನ್‌ ಅಲಿ 185ಕ್ಕೆ 3) ಎರಡನೇ ಇನಿಂಗ್ಸ್‌: ಪಾಕಿಸ್ತಾನ 31 ಓವರ್‌ಗಳಲ್ಲಿ 2 ವಿಕೆಟ್‌ಗೆ 77 (ಅಬ್ದುಲ್ಲಾ ಶಫೀಕ್‌ 17, ಇಮಾಮ್‌ ಉಲ್‌ ಹಕ್‌ ಬ್ಯಾಟಿಂಗ್‌ 45, ನೌಮಾನ್‌ ಅಲಿ ಬ್ಯಾಟಿಂಗ್‌ 4, ಮೈಕಲ್‌ ಬ್ರೇಸ್‌ವೆಲ್‌ 23ಕ್ಕೆ 1, ಇಶ್‌ ಸೋಧಿ 17ಕ್ಕೆ 1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.