ಚಂಡೀಗಢ: ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಮಂಗಳವಾರ ಘೋಷಿಸಿದೆ. ಆದರೆ ಮೊಹಾಲಿ ಸೇರಿದಂತೆ ಪ್ರಮುಖ ನಗರಗಳಿಗೆ ಆತಿಥ್ಯ ವಹಿಸುವ ಅವಕಾಶ ನೀಡದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕ್ರಿಕೆಟ್‌ನಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ವಿಪಕ್ಷಗಳ ನಾಯಕರು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ವಿಶ್ವಕಪ್ ಆತಿಥ್ಯ ವಹಿಸುವ ತಾಣಗಳ ಪಟ್ಟಿಯಿಂದ ಮೊಹಾಲಿಯನ್ನು ಏಕೆ ಕೈಬಿಡಲಾಗಿದೆ ಎಂದು ಬಿಸಿಸಿಐ ಮತ್ತು ಐಸಿಸಿಯನ್ನು ಪ್ರಶ್ನೆ ಮಾಡಿದ್ದಾರೆ.
ವಿಶ್ವಕಪ್‌ನಲ್ಲಿ ಹಲವು ಸ್ಮರಣೀಯ ಪಂದ್ಯಗಳಿಗೆ ಮೊಹಾಲಿ ವೇದಿಕೆಯಾಗಿದೆ. ಆದರೆ ಈ ಬಾರಿ ಒಂದು ಪಂದ್ಯವನ್ನು ಕೊಟ್ಟಿಲ್ಲ. ಇದರ ಹಿಂದೆ ರಾಜಕೀಯ ಕುತಂತ್ರ ಅಡಗಿದೆ ಎಂದು ಪಂಜಾಬ್ ಕ್ರೀಡಾ ಸಚಿವ ಗುರಮೀತ್ ಸಿಂಗ್ ಮಂಗಳವಾರ ಆರೋಪಿಸಿದ್ದರು.
ಭಾರತ ಆತಿಥ್ಯ ವಹಿಸುವ 2023 ಏಕದಿನ ವಿಶ್ವಕಪ್ ಒಟ್ಟು 10 ತಾಣಗಳಲ್ಲಿ ನಡೆಯಲಿವೆ. ಹೈದರಾಬಾದ್, ಅಹಮದಾಬಾದ್, ಧರ್ಮಶಾಲಾ, ದೆಹಲಿ, ಚೆನ್ನೈ, ಲಖನೌ, ಪುಣೆ, ಬೆಂಗಳೂರು, ಮುಂಬೈ ಮತ್ತು ಕೋಲ್ಕತ್ತ ನಗರಗಳಲ್ಲಿ ಪಂದ್ಯಗಳು ಆಯೋಜನೆಯಾಗಲಿದೆ.
ಉದ್ಘಾಟನಾ ಹಾಗೂ ಫೈನಲ್ ಸೇರಿದಂತೆ ಒಟ್ಟು ಐದು ಪಂದ್ಯಗಳು ಅಹಮದಾಬಾದ್‌ನಲ್ಲಿ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.