ಮೀರತ್: ಭಾರತ ತಂಡದ ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್ ಮತ್ತು ಅವರ ಮಗ ಮೀರತ್‌ನಲ್ಲಿ ಮಂಗಳವಾರ ರಾತ್ರಿ ರಸ್ತೆ ಅಪಘಾತದಲ್ಲಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ವಾಹನಕ್ಕೆ, ಹಿಂದಿನಿಂದ ಟ್ರಕ್ ಹೊಡೆದಿದೆ.
ಬಾಗಪತ್ ರಸ್ತೆಯ ಮುಲ್ತಾನ್ ನಗರ ನಿವಾಸಿಯಾದ ಕುಮಾರ್, ಪಾಂಡವನಗರದಿಂದ ಮಗನೊಂದಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ಅರವಿಂದ್ ಚೌರಾಸಿಯಾ ತಿಳಿಸಿದ್ದಾರೆ. ಈ ಅಪಘಾತ, ದೆಹಲಿ– ಡೆಹ್ರಾಡೂನ್ ಹೆದ್ದಾರಿಯಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಿಷಭ್ ಪಂತ್ ಅವರ ಕಾರು ಅಪಘಾತವನ್ನು ನೆನಪಿಸಿತು.
ಕಮಿಷನರ್ ನಿವಾಸದ ಮುಂದೆ ಪ್ರವೀಣ್ ಚಲಾಯಿಸುತ್ತಿದ್ದ ಎಸ್‌ಯುವಿ ತಲುಪುತ್ತಿದ್ದಂತೆ, ವೇಗವಾಗಿ ಬರುತ್ತಿದ್ದ ಟ್ರಕ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ.
‘ನಾನು ಮತ್ತು ನನ್ನ ಪುತ್ರ ಸುರಕ್ಷಿತವಾಗಿದ್ದೇವೆ’ ಎಂದು 36 ವರ್ಷದ ಪ್ರವೀಣ್ ತಿಳಿಸಿದ್ದಾರೆ. ಭಾರತ ತಂಡದ ಪರ ಅವರು ಆರು ಟೆಸ್ಟ್, 68 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
‘ದೇವರ ದಯೆಯಿಂದ ಇದು ದೊಡ್ಡ ಅವಘಡ ತಪ್ಪಿದೆ. ನನ್ನ ಸೋದರನ ಮಗನನ್ನು ಬಿಡಲು ಹೋಗಿದ್ದೆ. ರಾತ್ರಿ 9.30ರ ಹೊತ್ತಿಗೆ ನನ್ನ ವಾಹನಕ್ಕೆ ಟ್ರಕ್ ಡಿಕ್ಕಿಯಾಗಿದೆ. ಸ್ವಲ್ಪದರಲ್ಲೇ ಗಂಭೀರ ಗಾಯಗಳಿಂದ ಪಾರಾಗಿದ್ದೇವೆ’ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.