ADVERTISEMENT

ಟೀಕಿಸಿ, ಆದರೆ ನಿಂದಿಸಬೇಡಿ: ಸರ್ಫರಾಜ್‌

ಪಿಟಿಐ
Published 26 ಜೂನ್ 2019, 19:46 IST
Last Updated 26 ಜೂನ್ 2019, 19:46 IST
   

ಬರ್ಮಿಂಗಂ (ಪಿಟಿಐ): ಆಟಗಾರರ ವಿರುದ್ಧ ಬೇಕಾದರೆ ಟೀಕಿಸಿ, ಆದರೆ ನಿಂದನೆಯ ಮಾತುಗಳನ್ನಾಡಬೇಡಿ ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್‌ ಅಹಮದ್‌, ದೇಶದ ಕಟ್ಟಾ ಕ್ರಿಕೆಟ್‌ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಕ್ರಿಕೆಟ್ ಅಭಿಮಾನಿಯೊಬ್ಬ ತಮ್ಮನ್ನು ‘ಕೊಬ್ಬಿದ ಹಂದಿ’ ಎಂದು ಕರೆದ ನಂತರ ಸರ್ಫರಾಜ್‌ ಈ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ವೇಗದ ಬೌಲರ್ ಮೊಹಮ್ಮದ್‌ ಅಮೀರ್‌ ಮತ್ತು ಆಲ್‌ರೌಂಡರ್‌ ಶೋಯೆಬ್‌ ಮಲಿಕ್‌ ಕೂಡ ನಿಂದಿಸದಂತೆ ಅಭಿಮಾನಿಗಳಿಗೆ ಕೋರಿದ್ದರು.

ಬದ್ಧ ಎದುರಾಳಿ ಭಾರತ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಮುಖಭಂಗ ಅನುಭವಿಸಿದ ನಂತರ ಪಾಕ್‌ ಆಟಗಾರರ ವಿರುದ್ಧ ಟೀಕಾಪ್ರಹಾರ ಎಗ್ಗಿಲ್ಲದೇ ನಡೆದಿದೆ.

ADVERTISEMENT

‘ಮಗನನ್ನು ತೆಕ್ಕೆಯಲ್ಲಿಟ್ಟುಕೊಂಡು ಇಂಗ್ಲೆಂಡ್‌ನ ಮಾಲ್‌ ಒಂದರಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕ್ರಿಕೆಟ್‌ ಪ್ರೇಮಿಯೊಬ್ಬ– ನೀವೇಕೆ ಕೊಬ್ಬಿದ ಹಂದಿ (ಫ್ಯಾಟ್‌ ಪಿಗ್‌) ಯಂತೆ ಕಾಣಿಸುತ್ತೀರಿ?’ ಎಂದು ಕೇಳಿರುವ ತಾಜಾ ವಿಡಿಯೊ ಇತ್ತೀಚೆಗೆ ಬೆಳಕಿಗೆ ಬಂದಿತ್ತು.

‘ಈ ಬಗ್ಗೆ ನನಗೇನೂ ಹೇಳಲಾಗದು. ನಮ್ಮ ಬಗ್ಗೆ ಜನರು ಏನು ಹೇಳುತ್ತಾರೆ ಎಂಬುದನ್ನು ತಡೆಯಲು ನಮ್ಮ ಕೈಲಿ ಸಾಧ್ಯವಿಲ್ಲ. ಸೋಲು– ಗೆಲುವು ಆಟದ ಅಂಗ. ನಾವು ಮಾತ್ರ ಸೋತ ತಂಡವಲ್ಲ. ನಮಗಿಂತ ಹಿಂಧೆ ಆಡಿದ ತಂಡಗಳೂ ಸೋತಿವೆ’ ಎಂದು ಸರ್ಫರಾಜ್‌, ಲಂಡನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡ ಗೆದ್ದ ನಂತರ ಹೇಳಿದರು.

‘ಈ ಹಿಂದಿನ ತಂಡಗಳೂ ನಾವು ಎದುರಿಸಿದ ಪರಿಸ್ಥಿತಿಯನ್ನು ಕಂಡಿವೆ. ಎಷ್ಟು ನೋವು ಅನುಭವಿಸುತ್ತೇವೆಂದು ಗೊತ್ತಿದೆ. ಈಗ ಸಾಮಾಜಿಕ ಜಾಲತಾಣಗಳೂ ಇರುವುದರಿಂದ ಜನರು ತಮಗೆ ಬೇಕಾದದ್ದನ್ನು ಬರೆದುಕೊಳ್ಳುತ್ತಾರೆ. ಇದು ಆಟಗಾರರ ಮನಃಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ’ ಎಂದಿದ್ದಾರೆ ಪಾಕ್‌ ನಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.