ಅಹಮದಾಬಾದ್: ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಛಲದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಕ್ರವಾರ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿದೆ.
12 ಅಂಕ ಗಳಿಸಿರುವ ಋತುರಾಜ್ ಗಾಯಕವಾಡ ನಾಯಕತ್ವದ ಚೆನ್ನೈ ತಂಡದಲ್ಲಿ ಅನುಭವಿ ಬೌಲರ್‌ಗಳ ಕೊರತೆ ಇದೆ. ಆದರೆ ಆಲ್‌ರೌಂಡರ್‌ಗಳ ಮೇಲೆಯೇ ತಂಡವು ಅವಲಂಬಿತವಾಗಿದೆ. ಮುಸ್ತಫಿಜುರ್ ರೆಹಮಾನ್, ದೀಪಕ್ ಚಾಹರ್ ಮತ್ತು ಮಥೀಷ ಪಥಿರಾಣ ಅವರು ಲಭ್ಯರಿಲ್ಲ. ತುಷಾರ್ ದೇಶಪಾಂಡೆ ಹಾಗೂ ರಿಚರ್ಡ್ ಗ್ಲೀಸನ್ ಅವರ ಮೇಲೆ ನಿರೀಕ್ಷೆ ಇದೆ. ಉಳಿದಂತೆ ಶಾರ್ದೂಲ್ ಠಾಕೂರ್, ಸ್ಪಿನ್ನರ್ ರವೀಂದ್ರ ಜಡೇಜ, ಮಿಚೆಲ್ ಸ್ಯಾಂಟನರ್ ಹಾಗೂ ಮೋಯಿನ್ ಅಲಿ ಅವರೇ ಆಸರೆ.
ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಜಡೇಜ ಆಲ್‌ರೌಂಡ್ ಆಟವೇ ಜಯಕ್ಕೆ ಕಾರಣವಾಗಿತ್ತು. ಆದರೆ ಬ್ಯಾಟಿಂಗ್‌ನಲ್ಲಿಯೂ ಋತುರಾಜ್, ಡ್ಯಾರಿಲ್ ಮಿಚೆಲ್, ಶಿವಂ ದುಬೆ ಹಾಗೂ ಜಡೇಜ ಅವರನ್ನೇ ತಂಡವು ನೆಚ್ಚಿಕೊಳ್ಳಬೇಕಾಗಿದೆ. ಅಜಿಂಕ್ಯ ರಹಾನೆ ಅವರು ಲಯಕ್ಕೆ ಮರಳುತ್ತಿಲ್ಲ. ಮೋಯಿನ್ ಅಲಿ ಕೂಡ ರನ್ ಗಳಿಸಿದರೆ ತಂಡದ ಬಲ ಹೆಚ್ಚಲಿದೆ. ಧರ್ಮಶಾಲಾದಲ್ಲಿ ಪಂಜಾಬ್ ಎದುರು 167 ರನ್‌ಗಳ ಸಾಧಾರಣ ಗುರಿಯೊಡ್ಡಿಯೂ ಚೆನ್ನೈ ಗೆದ್ದಿತ್ತು.
ಸದ್ಯ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡದ ಎದುರೂ ಇಂತಹದೇ ಛಲದಾಟ ತೋರುವ ಹುಮ್ಮಸ್ಸಿನಲ್ಲಿ ಚೆನ್ನೈ ಇದೆ. ಟೂರ್ನಿಯ ಮೊದಲ ಸುತ್ತಿನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದ ಸಂದರ್ಭದಲ್ಲಿಯೂ ಚೆನ್ನೈ ಜಯಿಸಿತ್ತು.
ತನ್ನ ಕಳೆದ ಮೂರು ಪಂದ್ಯಗಳಲ್ಲಿಯೂ ಗುಜರಾತ್ ಸತತವಾಗಿ ಸೋತಿದೆ. ಶುಭಮನ್ ಗಿಲ್ ನಾಯಕತ್ವದ ತಂಡವು ಜಯದ ಹಾದಿಗೆ ಮರಳುವ ಪ್ರಯತ್ನದಲ್ಲಿದೆ. ಅನುಭವಿ ಮೋಹಿತ್ ಶರ್ಮಾ, ಅಫ್ಗನ್ ಸ್ಪಿನ್ನರ್ ರಶೀದ್ ಖಾನ್ ಅವರು ಇರುವ ಬೌಲಿಂಗ್ ವಿಭಾಗವು ಚೆನ್ನಾಗಿದೆ. ಬ್ಯಾಟಿಂಗ್‌ನಲ್ಲಿ ಶುಭಮನ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ ಹಾಗೂ ಶಾರೂಕ್ ಖಾನ್ ಅವರು ತಮ್ಮ ಲಯ ಕಂಡುಕೊಂಡರೆ ತಂಡವು ಪುಟಿದೇಳಬಹುದು. ಚೆನ್ನೈ ತಂಡದ ಪ್ಲೇ ಆಫ್ ಹಾದಿಯನ್ನು ಕಠಿಣಗೊಳಿಸಬಹುದು!
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಸಿನಿಮಾ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.