ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು2023ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೂ ಮುನ್ನ ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಡ್ವೇನ್ ಬ್ರಾವೊ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ.
ವೈಯಕ್ತಿಕ ಕಾರಣಗಳಿಂದಾಗಿ ಒಂದು ವರ್ಷ ವಿರಾಮ ಪಡೆಯಲಿರುವ ಲಕ್ಷ್ಮೀಪತಿ ಬಾಲಾಜಿ ಅವರ ಸ್ಥಾನವನ್ನು ಬ್ರಾವೊ ತುಂಬಲಿದ್ದಾರೆ.
'ಐಪಿಎಲ್‌ನಲ್ಲಿ ಅಮೋಘವಾಗಿ ಆಟವಾಡಿರುವ ಡ್ವೇನ್ ಬ್ರಾವೊಗೆ ಅಭಿನಂದನೆಗಳು. ಅವರು ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಸೂಪರ್ ಕಿಂಗ್ಸ್ ಕುಟುಂಬದ ನಿರ್ಣಾಯಕ ಸದಸ್ಯರಾಗಿದ್ದರು. ಅವರ ಸಹಕಾರದೊಂದಿಗೆ ಮುಂದುವರಿಯುವುದನ್ನು ಎದುರು ನೋಡುತ್ತಿದ್ದೇವೆ' ಎಂದು ಸಿಎಸ್‌ಕೆ ಸಿಇಒ ಕೆ.ಎಸ್.ವಿಶ್ವನಾಥನ್ ಹೇಳಿದ್ದಾರೆ.
'ಆಟದ ದಿನಗಳು ಸಂಪೂರ್ಣ ಮುಗಿದಿದ್ದು, ಹೊಸ ಪ್ರಯಾಣ ಮುಂದುವರಿಸಲು ಉತ್ಸುಕನಾಗಿದ್ದೇನೆ. ಬೌಲರ್‌ಗಳೊಂದಿಗೆ ಕೆಲಸ ಮಾಡುವುದನ್ನು ಆನಂದಿಸುತ್ತೇನೆ' ಎಂದು ಬ್ರಾವೊ ತಿಳಿಸಿರುವುದಾಗಿ ಸಿಎಸ್‌ಕೆ ಹೇಳಿಕೆ ಬಿಡುಗಡೆ ಮಾಡಿದೆ.
'ಆಟಗಾರನಾಗಿದ್ದವನು ಈಗ ಕೋಚ್ ಆಗುತ್ತಿದ್ದೇನೆ. ತುಂಬಾ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಭಾವಿಸಿಲ್ಲ. ಏಕೆಂದರೆ, ನಾನು ಆಡುತ್ತಿದ್ದಾಗಲೂ ಬೌಲರ್‌ಗಳೊಂದಿಗೆ ಹೆಚ್ಚು ಕೆಲಸ ಮಾಡಿದ್ದೇನೆ. ಬ್ಯಾಟರ್‌ಗಳೆದುರು ಮೇಲುಗೈ ಸಾಧಿಸುವ ನಿಟ್ಟಿನಲ್ಲಿ ಯೋಜನೆ, ತಂತ್ರಗಾರಿಕೆ ನಡೆಸಿದ್ದೇನೆ. ಒಂದೇ ಒಂದು ವ್ಯತ್ಯಾಸವೆಂದರೆ, ನಾನು ಮಿಡ್ ಆನ್ ಅಥವಾ ಮಿಡ್ ಆಫ್‌ನಲ್ಲಿ ಇರುವುದಿಲ್ಲ (ಆಟಗಾರನಾಗಿ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ) ಎಂಬುದು' ಎಂದು ಅವರು ಹೇಳಿದ್ದಾರೆ.
'ನಾನು ಐಪಿಎಲ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಬಗ್ಗೆ ಹೆಚ್ಚು ಆಲೋಚಿಸಿಲ್ಲ. ಐಪಿಎಲ್ ಇತಿಹಾಸದ ಭಾಗವಾಗಿದ್ದಕ್ಕೆ ಸಂತಸವಿದೆ' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಐಪಿಎಲ್‌ನಲ್ಲಿ 161 ಪಂದ್ಯಗಳ 158 ಇನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿರುವ ಬ್ರಾವೊ183 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು,ಐಪಿಎಲ್ ಆವೃತ್ತಿಯೊಂದರಲ್ಲಿ ಹೆಚ್ಚು ವಿಕೆಟ್ ಪಡೆದವರಿಗೆ ನೀಡುವ ಪರ್ಪಲ್ ಕ್ಯಾಪ್ ಅನ್ನುಎರಡು ಬಾರಿ (2013, 2015) ಗಳಿಸಿದ ಮೊದಲ ಆಟಗಾರರೂ ಹೌದು.
2011ರಿಂದ ಸಿಎಸ್‌ಕೆ ಪರ ಆಡುತ್ತಿರುವ ಬ್ರಾವೊ, 2011, 2018 ಹಾಗೂ 2021ರಲ್ಲಿ ಮತ್ತು 2014ರಲ್ಲಿ ಚಾಂಪಿಯನ್ಸ್ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದ ತಂಡದಲ್ಲಿ ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.