ADVERTISEMENT

ಫಫ್ ಡುಪ್ಲೆಸಿ ಅವರ ವಿವಾದಾತ್ಮಕ ರನೌಟ್ ತೀರ್ಪು: ಅಭಿಮಾನಿಗಳು, ನೆಟ್ಟಿಗರ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮೇ 2024, 6:08 IST
Last Updated 19 ಮೇ 2024, 6:08 IST
Venugopala K.
   Venugopala K.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಶನಿವಾರ ನಡೆದ ಐಪಿಎಲ್ ಪಂದ್ಯವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಅದ್ಭುತವಾಗಿ ಆಡುತ್ತಿದ್ದ ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ ಅವರು 3ನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಇದು ಆರ್‌ಸಿಬಿ, ಅಭಿಮಾನಿಗಳು ಮತ್ತು ನೆಟ್ಟಿಗರನ್ನು ಕೆರಳಿಸಿದೆ.

ಮಿಚೆಲ್ ಸಾಂಟ್ನರ್ ಎಸೆದ 13ನೇ ಓವರ್‌ನ ಕೊನೆಯ ಎಸೆತದಲ್ಲಿ ಈ ಘಟನೆ ನಡೆದಿದೆ. ಪಾಟಿದಾರ್ ಹೊಡೆದ ಚೆಂಡು ಸಾಂಟ್ನರ್ ಕೈ ತಾಗಿ ವಿಕೆಟ್‌ಗೆ ಬಡಿದಿತ್ತು. ಬೌಲರ್ ಮನವಿ ಹಿನ್ನೆಲೆಯಲ್ಲಿ ನಾನ್ ಸ್ಟ್ರೈಕರ್ ಎಂಡ್‌ನಲ್ಲಿ ಇದ್ದ ಡುಪ್ಲೆಸಿ ಅವರನ್ನು ಔಟ್ ಎಂದು ಘೋಷಿಸಲಾಗಿತ್ತು.

ಚೆಂಡು ವಿಕೆಟ್‌ಗೆ ತಾಗಿ ಬೇಲ್ಸ್ ಉರುಳುವ ಹೊತ್ತಿಗೆ ಡುಪ್ಲೆಸಿ ಅವರ ಬ್ಯಾಟ್ ಕ್ರೀಸ್‌ನ ಗೆರೆ ಮುಟ್ಟಿತ್ತೇ? ಅಥವಾ ಬ್ಯಾಟ್ ಗಾಳಿಯಲ್ಲಿತ್ತೇ ಎಂಬ ಬಗ್ಗೆ ಥರ್ಡ್ ಅಂಪೈರ್ ಮೈಕಲ್ ಗೌ ಹಲವು ಬಾರಿ ಪರಿಶೀಲನೆ ನಡೆಸಿದರು. ಬ್ಯಾಟ್ ಕ್ರೀಸ್‌ಗೆ ತಾಗಿರುವಂತೆ ಕಂಡುಬಂದರೂ ಔಟ್ ಎಂದು ತೀರ್ಪಿತ್ತರು. ಇದರಿಂದ ಅಸಮಾಧಾನಗೊಂಡ ಡುಪ್ಲೆಸಿ ಗೊಣಗುತ್ತಲೇ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

ADVERTISEMENT

ಇದು ರಜತ್ ಪಾಟೀದಾರ್, ಆರ್‌ಸಿಬಿ ಕ್ಯಾಂಪ್‌ಗೆ ಆಘಾತವನ್ನು ಉಂಟುಮಾಡಿತು. ವಿರಾಟ್ ಕೊಹ್ಲಿ ಸಹ ಅಚ್ಚರಿ ವ್ಯಕ್ತಪಡಿಸಿದರು.

ಥರ್ಡ್ ಅಂಪೈರ್ ಕಡೆಯಿಂದ ತಪ್ಪು ನಿರ್ಣಯ. ನಾನು ಸಿಎಸ್‌ಕೆ ಅಭಿಮಾನಿ. ಆದರೆ, ಇಲ್ಲಿ ಡುಪ್ಲೆಸಿ ನಾಟೌಟ್ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಆರ್‌ಸಿಬಿ ಅಭಿಮಾನಿಗಳು ನಾಟೌಟ್ ಎಂದರೆ, ಸಿಎಸ್‌ಕೆ ಅಭಿಮಾನಿಗಳು ಔಟ್ ಎನ್ನುತ್ತಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ.

ಹೇ ಪೀಪ್ಸ್, ಕೆಲವರು ಇದು ರನೌಟ್ ಆಗಿಲ್ಲ ಎಂದು ಹೇಳುತ್ತಾರೆನೋ ನನಗೆ ಗೊತ್ತಿಲ್ಲ. ಕೆಲ ಸೆಕೆಂಡುಗಳ ಕಾಲ ಬ್ಯಾಟ್ ಗಾಳಿಯಲ್ಲಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ವಿಡಿಯೊ ನೋಡಿ. ಇದು ಸ್ಪಷ್ಟವಾಗಿ ರನೌಟ್ ಎಂದು ಮತ್ತೊಬ್ಬ ನೆಟ್ಟಿಗರು ಬರೆದುಕೊಂಡಿದ್ದಾರೆ.

ಪ್ಲೇ ಆಫ್ ತಲುಪಲು ಈ ಪಂದ್ಯದಲ್ಲಿ 18 ರನ್‌ಗಳಿಂದ ಗೆಲ್ಲಬೇಕಿದ್ದ ಆರ್‌ಸಿಬಿ, 27 ರನ್‌ಗಳಿಂದ ಗೆದ್ದಿತು.

ಆರ್‌ಸಿಬಿ ನೀಡಿದ್ದ 219 ರನ್ ಗುರಿ ಬೆನ್ನತ್ತಿದ ಸಿಎಸ್‌ಕೆ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು. ಫಫ್ ಡುಪ್ಲೆಸಿ ಅವರ ಅದ್ಭುತ ಕ್ಯಾಚ್ ಮತ್ತು ಬ್ಯಾಟಿಂಗ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್ ಅವರ ಸಮಯೋಚಿತ ಆಟ, ಯಶ್ ದಯಾಳ್ ಅವರ 20ನೇ ಓವರ್‌ನ ಗಮನಾರ್ಹ ಬೌಲಿಂಗ್ ಸೇರಿದಂತೆ ಹಲವು ವಿಷಯಗಳು ಪಂದ್ಯದಲ್ಲಿ ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.