ADVERTISEMENT

IPL 2024 | ಚೆನ್ನೈ 'ಸೂಪರ್' ಬೌಲಿಂಗ್; ಸಾಧಾರಣ ಮೊತ್ತಕ್ಕೆ ಕುಸಿದ ರಾಜಸ್ಥಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2024, 9:42 IST
Last Updated 12 ಮೇ 2024, 9:42 IST
<div class="paragraphs"><p>ಸಿಮರ್‌ಜಿತ್‌ ಸಿಂಗ್‌ ಅವರನ್ನು ಅಭಿನಂದಿಸುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಹ ಆಟಗಾರರು</p></div>

ಸಿಮರ್‌ಜಿತ್‌ ಸಿಂಗ್‌ ಅವರನ್ನು ಅಭಿನಂದಿಸುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಹ ಆಟಗಾರರು

   

‍‍ಪಿಟಿಐ ಚಿತ್ರ

ಚೆನ್ನೈ: ಆತಿಥೇಯ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆಯುತ್ತಿರುವ ಐಪಿಎಲ್‌ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ರಾಯಲ್ಸ್‌, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 141 ರನ್‌ ಕೆಲಹಾಕಿದೆ.

ADVERTISEMENT

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ಬೌಲರ್‌ಗಳು ಶಿಸ್ತಿನ ಬೌಲಿಂಗ್‌ ಸಂಘಟಿಸಿದರು. ಹೀಗಾಗಿ, ರಾಯಲ್ಸ್‌ ಬ್ಯಾಟರ್‌ಗಳು ಲೀಲಾಜಾಲವಾಗಿ ಬ್ಯಾಟ್‌ ಬೀಸಲು ಸಾಧ್ಯವಾಗಲಿಲ್ಲ.

ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಸಿಮರ್‌ಜಿತ್‌ ಸಿಂಗ್‌ 4 ಓವರ್‌ಗಳಲ್ಲಿ 26 ರನ್‌ ನೀಡಿ ಪ್ರಮುಖ 3 ವಿಕೆಟ್‌ ಕಬಳಿಸಿದರೆ, ತುಷಾರ್‌ ದೇಶಪಾಂಡೆ ಇಷ್ಟೇ ಓವರ್‌ಗಳಲ್ಲಿ 30 ರನ್‌ ನೀಡಿ 2 ವಿಕೆಟ್‌ ಕಿತ್ತರು. ಉಳಿದ ಬೌಲರ್‌ಗಳಿಂದಲೂ ಉತ್ತಮ ಸಹಕಾರ ದೊರೆಯಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ರಾಯಲ್ಸ್‌ ಪಡೆಗೆ ಬಿರುಸಿನ ಆರಂಭ ಸಿಗಲಿಲ್ಲ. ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಮತ್ತು ಜೋಸ್‌ ಬಟ್ಲರ್‌ ರಕ್ಷಣಾತ್ಮಕ ಆಟದ ಮೊರೆ ಹೋದರು. ಈ ಜೋಡಿ, ಮೊದಲ ವಿಕೆಟ್‌ಗೆ 6.2 ಓವರ್‌ಗಳಲ್ಲಿ 43 ರನ್ ಕಲೆಹಾಕಿತು. ಜೈಸ್ವಾಲ್‌ 21 ಎಸೆತಗಳಲ್ಲಿ 24 ರನ್ ಗಳಿಸಿದರೆ, ಬಟ್ಲರ್‌ ಆಟ 25 ಎಸೆತಗಳಲ್ಲಿ 21 ರನ್ ಗಳಿಸುವಷ್ಟರಲ್ಲಿ ಕೊನೆಯಾಯಿತು.

ಬಳಿಕ ಬಂದ ನಾಯಕ ಸಂಜು ಸ್ಯಾಮ್ಸನ್‌ (19 ಎಸೆತಗಳಲ್ಲಿ 15 ರನ್) ಸಹ ಹೆಚ್ಚು ರನ್‌ ಗಳಿಸದೆ ಪೆವಿಲಿಯನ್‌ ಸೇರಿಕೊಂಡರು.

ಈ ಹಂತದಲ್ಲಿ ಜೊತೆಯಾದ ರಿಯಾನ್‌ ಪರಾಗ್ ಮತ್ತು ಧ್ರುವ್‌ ಜುರೇಲ್‌, ನಾಲ್ಕನೇ ವಿಕೆಟ್‌ಗೆ 40 ರನ್ ಸೇರಿದರು. ಜುರೇಲ್‌ 18 ಎಸೆತಗಳಲ್ಲಿ 28 ರನ್ ಬಾರಿಸಿ ಔಟಾದರು. ಬಿರುಸಾಗಿ ಬ್ಯಾಟ್‌ ಬೀಸಿದ ಪರಾಗ್‌ 47 ರನ್ ಗಳಿಸಿ ಅಜೇಯರಾಗಿ ಉಳಿದರು. 35 ಎಸೆತೆಗಳನ್ನು ಎದುರಿಸಿದ ಅವರ ಇನಿಂಗ್ಸ್‌ನಲ್ಲಿ ಒಂದು ಬೌಂಡರಿ, ಮೂರು ಸಿಕ್ಸರ್‌ ಇದ್ದವು.

ಇದಿರಂದಾಗಿ, ರಾಯಲ್ಸ್‌ ತಂಡದ ಮೊತ್ತ 140ರ ಗಡಿದಾಟಲು ಸಾಧ್ಯವಾಯಿತು.

ಋತುರಾಜ್‌ ಗಾಯಕವಾಡ್‌ ನಾಯಕತ್ವದ ಚೆನ್ನೈ ಪಡೆ ಈ ಪಂದ್ಯದಲ್ಲಿ ಗೆದ್ದರೆ, ಪ್ಲೇ ಆಫ್‌ ಸ್ಪರ್ಧೆಯಲ್ಲಿ ಉಳಿದುಕೊಳ್ಳಲಿದೆ. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಸ್ಯಾಮ್ಸನ್‌ ನಾಯಕತ್ವದ ರಾಯಲ್ಸ್‌ಗೂ ಇದು ಮಹತ್ವದ ಪಂದ್ಯವಾಗಿದೆ. ಇಲ್ಲಿ ಜಯ ಗಳಿಸಿದರೆ, ಪ್ಲೇ ಆಫ್‌ ಸ್ಥಾನ ಖಚಿತವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.