ಕರಾಚಿ: ಚಾಂಪಿಯನ್ಸ್ ಟ್ರೋಪಿ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡಕ್ಕೆ ಸರ್ಕಾರವು ಭದ್ರತೆಯ ಕಾರಣ ನೀಡಿ ಅನುಮತಿ ನಿರಾಕರಿಸಿದ್ದರೆ ಅದಕ್ಕೆ ಲಿಖಿತ ಪುರಾವೆ ನೀಡಿ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿದೆ ಎಂದು ಮೂಲಗಳು ತಿಳಿಸಿವೆ.
ಟೂರ್ನಿಯು ಫೆಬ್ರುವರಿ-ಮಾರ್ಚ್‌ನಲ್ಲಿ ನಿಗದಿಯಾಗಿರುವುದರಿಂದ ವಿಷಯವನ್ನು ಆದಷ್ಟು ಬೇಗ ಇತ್ಯರ್ಥಪಡಿಸಲು ಪಿಸಿಬಿ ಮುಂದಾಗಿದೆ.
ಜುಲೈ 19ರಂದು ಕೊಲಂಬೊದಲ್ಲಿ ನಡೆಯಲಿರುವ ಐಸಿಸಿ ವಾರ್ಷಿಕ ಸಮ್ಮೇಳನ ನಡೆಯಲಿದೆ. ಭಾರತವು ಯುಎಇಯಲ್ಲಿ ಆಡುವ 'ಹೈಬ್ರಿಡ್ ಮಾದರಿ' ಕುರಿತ ಚರ್ಚೆ ಕಾರ್ಯದೂಚಿಸಯಲ್ಲಿ ಇಲ್ಲ. ಒಂದು ವೇಳೆ ಟೂರ್ನಿಯಲ್ಲಿ ಎರಡು ರಾಷ್ಟ್ರಗಳಲ್ಲಿ ನಡೆದರೆ ತಗಲಬಹುದಾದ ಹೆಚ್ಚುವರಿ ನಿಧಿಯನ್ನು ತೆಗೆದಿರಿಸಿದೆ.
‘ಭಾರತ ಸರ್ಕಾರವು ಅನುಮತಿಯನ್ನು ನಿರಾಕರಿಸಿದರೆ ಅದು ಲಿಖಿತವಾಗಿರಬೇಕು. ಆ ಪತ್ರವನ್ನು ಬಿಸಿಸಿಐ, ಐಸಿಸಿಗೆ ನೀಡುವುದು ಕಡ್ಡಾಯವಾಗಿದೆ’ ಎಂದು ಪಿಸಿಬಿ ಮೂಲಗಳು ಪಿಟಿಐಗೆ ತಿಳಿಸಿವೆ.
‘ಪಾಕಿಸ್ತಾನಕ್ಕೆ ಪ್ರಯಾಣ ಯೋಜನೆಯ ಬಗ್ಗೆ ಬಿಸಿಸಿಐ ಕನಿಷ್ಠ ಪಕ್ಷ 5-6 ತಿಂಗಳ ಮೊದಲು ಲಿಖಿತವಾಗಿ ಐಸಿಸಿಗೆ ತಿಳಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ’ ಎಂದು ಪಿಸಿಬಿ ಉನ್ನತ ಮೂಲಗಳು ತಿಳಿಸಿವೆ.
ಪಿಸಿಬಿ ಆತಿಥ್ಯ ವಹಿಸಿದ 2023ರ ಏಕದಿನ ಏಷ್ಯಾ ಕಪ್ ಕೂಡ 'ಹೈಬ್ರಿಡ್ ಮಾದರಿ’ಯಲ್ಲಿ ನಡೆದಿತ್ತು. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು.
ಪಿಸಿಬಿ ಈಗಾಗಲೇ ವೇಳಾಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ. ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ನಿಗದಿಪಡಿಸಲಾಗಿದೆ. ಮಾರ್ಚ್ 1ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯ ನಿಗದಿಯಾಗಿದೆ.
ಟೂರ್ನಿಯು ಫೆಬ್ರುವರಿ 19ರಂದು ಪ್ರಾರಂಭವಾಗಿ ಮಾರ್ಚ್ 9ರ ವರೆಗೆ ನಡೆಯಲಿದೆ. ಉದ್ಘಾಟನಾ ಹಾಗೂ ಫೈನಲ್ ಪಂದ್ಯಗಳನ್ನು ಲಾಹೋರ್‌ನಲ್ಲಿ ನಿಗದಿಪಡಿಸಲಾಗಿದೆ. ಒಂದು ವೇಳೆ ಪ್ರತಿಕೂಲ ಹವಾಮಾನವಿದ್ದರೆ ಫೈನಲ್ ಪಂದ್ಯವನ್ನು ಮಾರ್ಚ್ 10 ಮೀಸಲು ದಿನದಂದು ನಡೆಸಲಾಗುತ್ತದೆ. ಕೆಲವು ಪಂದ್ಯಗಳನ್ನು ರಾವಲ್ಪಿಂಡಿಯಲ್ಲೂ ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.