ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೈಬ್ರಿಡ್ ಮಾದರಿಯೇ ಭಾರತದ ಮುಂದಿರುವ ಆಯ್ಕೆಯಾಗುವ ಸಾಧ್ಯತೆಯಿದೆ. ಸರ್ಕಾರದ ನೀತಿಗೆ ವಿರುದ್ಧವಾದಲ್ಲಿ ಐಸಿಸಿ ಭಾರತದ ಪಾಲ್ಗೊಳ್ಳುವಿಕೆಯನ್ನು ನಿರ್ಧರಿಸಲಾಗದು ಎಂದು ಐಸಿಸಿಯ ಕಾರ್ಯಕಾರಿ ಮಂಡಳಿಯ ಮೂಲವೊಂದು ತಿಳಿಸಿದೆ.
ಐಸಿಸಿ ಕಾರ್ಯಕಾರಿ ಮಂಡಳಿ ಸಭೆ ದುಬೈನಲ್ಲಿ ನಡೆಯುತ್ತಿದೆ. ಚಾಂಪಿಯನ್ಸ್ ಟ್ರೋಫಿ 2025ರ ಫೆಬ್ರುವರಿ –ಮಾರ್ಚ್‌ನಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಈ ಸಭೆಯ ಕಾರ್ಯಸೂಚಿಯಲ್ಲಿ ಇರಲಿಲ್ಲ. ಆದರೆ ನೂತನವಾಗಿ ಆಯ್ಕೆಯಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಕ್ವಿ ಅವರು ಈ ಸಂದರ್ಭವನ್ನು ಸಂಬಂಧಿಸಿದಂತೆ ಜಯ್ ಶಾ ಮತ್ತು ಐಸಿಸಿಯ ಇತರ ಪ್ರಮುಖರ ಜೊತೆ ಮಾತನಾಡಿ ಭಾರತದ ಪಾಲ್ಗೊಳ್ಳುವಿಕೆಯ ಬಗ್ಗೆ ಆಶ್ವಾಸನೆಯನ್ನು ಪಡೆಯಲು ಮುಂದಾದರು.
ಆದರೆ ಅಂತಿಮವ ನಿರ್ಧಾರವನ್ನು ಟೂರ್ನಿಯು ಸಮೀಪಿಸಿದಾಗ ಕೈಗೊಳ್ಳಲಾಗುತ್ತದೆ. ಜೊತೆಗೆ ಯುಎಇಯನ್ನು ಭಾರತದ ಪಂದ್ಯಗಳಿಗೆ ತಟಸ್ಥ ತಾಣವನ್ನಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗೆಳೆಯಲಾಗದು ಎಂದು ಈ ಬೆಳವಣಿಗೆಯ ಬಗ್ಗೆ ಮಾಹಿತಿಯಿರುವ ಐಸಿಸಿ ಮಂಡಳಿ ಸದಸ್ಯರೊಬ್ಬರು ತಿಳಿಸಿದರು.
ಇತ್ತೀಚಿನ ಕೆಲ ತಿಂಗಳಿಂದ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡಗಳು ಪಾಕಿಸ್ತಾನದಲ್ಲಿ ಆಡಿವೆ. ಭಾರತವೂ, ಆರ್ಥಿಕ ಬಿಕ್ಕಟ್ಟಿಗೆ ಜರ್ಝರಿತವಾಗಿರುವ ಈ ದೇಶಕ್ಕೆ ತೆರಳಬೇಕಾದ ಒತ್ತಡದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.