ಸೌಥಾಂಪ್ಟನ್: ಭಾರತದ ವೇಗದ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ ಇಂಗ್ಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. ಆದರೆ ಕೆಳ ಕ್ರಮಾಂಕದ ಸ್ಯಾಮ್ ಕರನ್, ತಂಡದ ಕೈ ಹಿಡಿದು ಪತನದಿಂದ ಪಾರು ಮಾಡಿದರು.
ಇಲ್ಲಿ ಗುರುವಾರ ಆರಂಭಗೊಂಡ ನಾಲ್ಕನೇ ಟೆಸ್ಟ್ ಪಂದ್ಯದ 35ನೇ ಓವರ್‌ನಲ್ಲಿ 86ಕ್ಕೆ ಆರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕರನ್ (78; 136 ಎಸೆತ, 1 ಸಿಕ್ಸರ್, 8 ಬೌಂಡರಿ) ಮತ್ತು ಮೊಯಿನ್ ಅಲಿ (40; 85ಎ, 2 ಸಿ, 2 ಬೌಂ) 81 ರನ್‌ಗಳ ಜೊತೆಯಾಟದ ಮೂಲಕ ಭರವಸೆ ಮೂಡಿಸಿದರು. ಆದರೆ ಇವರಿಬ್ಬರ ವಿಕೆಟ್ ಪತನದ ನಂತರ ಮತ್ತೆ ಮುಗ್ಗರಿಸಿ 246 ರನ್‌ಗಳಿಗೆ ಆಲೌಟಾಯಿತು. ದಿನದಾಟದ ಅಂತ್ಯಕ್ಕೆ ಭಾರತ ನಾಲ್ಕು ಓವರ್‌ಗಳಲ್ಲಿ 19 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆತಿಥೇಯರನ್ನು ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಮೊದಲ ಅವಧಿಯಲ್ಲಿ ಕಾಡಿದರು. ನಂತರ ಮೊಹಮ್ಮದ್ ಶಮಿ ಕೂಡ ಮೊನಚಾದ ದಾಳಿಯ ಮೂಲಕ ಮಿಂಚಿದರು. ಮೂರನೇ ಓವರ್‌ನಲ್ಲಿ ಬೂಮ್ರಾ ಅವರು ಕೀಟನ್ ಜೆನಿಂಗ್ಸ್ ವಿಕೆಟ್ ಪಡೆದರು. ಎಂಟನೇ ಓವರ್‌ನಲ್ಲಿ ನಾಯಕ ಜೋ ರೂಟ್ ಕೂಡ ವಿಕೆಟ್ ಒಪ್ಪಿಸಿದರು. ಜಾನಿ ಬೇಸ್ಟೊ ವಿಕೆಟ್ ಕಬಳಿಸಿ ಬೂಮ್ರಾ ಮತ್ತೊಂದು ಆಘಾತ ನೀಡಿದರು.
14ನೇ ಓವರ್‌ನಲ್ಲಿ ಚೆಂಡನ್ನು ಹಾರ್ದಿಕ್ ಪಾಂಡ್ಯ ಕೈಗೆ ನೀಡಿದ ನಾಯಕ ಕೊಹ್ಲಿ ಫಲ ಕಂಡರು. ಕುಕ್ ವಿಕೆಟ್ ಕಬಳಿಸಿ ಪಾಂಡ್ಯ ಸಂಭ್ರಮಿಸಿದರು. ಇನ್ನೊಂದು ತುದಿಯಿಂದ ದಾಳಿ ಆರಂಭಿಸಿದ ಮೊಹಮ್ಮದ್ ಶಮಿ ಅವರು ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ ವಿಕೆಟ್ ಉರುಳಿಸಿದರು.
ಕಾಡಿದ ಮೊಯಿನ್ ಅಲಿ, ಕರನ್: ಪತನದ ಹಾದಿ ಹಿಡಿದಿದ್ದ ಇಂಗ್ಲೆಂಡ್ ಇನಿಂಗ್ಸ್‌ಗೆ ಮೊಯಿನ್ ಅಲಿ ಮತ್ತು ಸ್ಯಾಮ್ ಕರನ್ ಚೇತರಿಕೆ ನೀಡಿದರು. ಈ ಜೊತೆಯಾಟವನ್ನು ಮುರಿಯುವುದರೊಂದಿಗೆ ರವಿಚಂದ್ರನ್ ಅಶ್ವಿನ್ ಮತ್ತೆ ಭಾರತಕ್ಕೆ ಮೇಲುಗೈ ಗಳಿಸಿಕೊಟ್ಟರು.
ಸಂಕ್ಷಿಪ್ತ ಸ್ಕೋರು:
ಇಂಗ್ಲೆಂಡ್, ಮೊದಲ ಇನಿಂಗ್ಸ್: 76.4 ಓವರ್‌ಗಳಲ್ಲಿ 246 (ಬೆನ್ ಸ್ಟೋಕ್ಸ್ 23, ಜೋಸ್ ಬಟ್ಲರ್ 21, ಮೊಯಿನ್ ಅಲಿ 40, ಸ್ಯಾಮ್ ಕರನ್ 78; ಜಸ್‌ಪ್ರೀತ್ ಬೂಮ್ರಾ 46ಕ್ಕೆ3, ಇಶಾಂತ್ ಶರ್ಮಾ 26ಕ್ಕೆ2, ಹಾರ್ದಿಕ್ ಪಾಂಡ್ಯ 51ಕ್ಕೆ1, ಮೊಹಮ್ಮದ್ ಶಮಿ 51ಕ್ಕೆ2, ರವಿಚಂದ್ರನ್ ಅಶ್ವಿನ್ 40ಕ್ಕೆ2);
ಭಾರತ, ಮೊದಲ ಇನಿಂಗ್ಸ್: 4 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 19 (ಶಿಖರ್ ಧವನ್ 3, ಕೆ.ಎಲ್.ರಾಹುಲ್ 11).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.