ADVERTISEMENT

ಆಯ್ಕೆದಾರರಿಗಿಲ್ಲ ಶಾಸ್ತ್ರಿ, ಕೊಹ್ಲಿಯಷ್ಟು ಅನುಭವ

ಹಿರಿಯ ಕ್ರಿಕೆಟಿಗ ಸೈಯದ್ ಕಿರ್ಮಾನಿ ಆಭಿಮತ

ಪಿಟಿಐ
Published 8 ಅಕ್ಟೋಬರ್ 2018, 20:14 IST
Last Updated 8 ಅಕ್ಟೋಬರ್ 2018, 20:14 IST
ಸೈಯದ್ ಕಿರ್ಮಾನಿ
ಸೈಯದ್ ಕಿರ್ಮಾನಿ   

ನವದೆಹಲಿ: ಎಂ.ಎಸ್‌.ಕೆ. ಪ್ರಸಾದ್ ನೇತೃತ್ವದ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿಯ ಯಾವ ಸದಸ್ಯನಿಗೂ ಭಾರತ ತಂಡದ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿಯವರಿಗೆ ಇರುವಷ್ಟು ಅನುಭವವಿಲ್ಲ. ಆದ್ದರಿಂದ ಅವರಿಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ಕ್ರಿಕೆಟಿಗ ಸೈಯದ್ ಕಿರ್ಮಾನಿ ಅಭಿಪ್ರಾಯಪಟ್ಟಿದ್ದಾರೆ.

ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಿಂದ ಮುರಳಿ ವಿಜಯ್ ಮತ್ತು ಕರ್ನಾಟಕದ ಕರುಣ್ ನಾಯರ್ ಅವರನ್ನು ಪರಿಗಣಿಸದಿರುವ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

ಆಯ್ಕೆ ಸಮಿತಿಯಿಂದ ಯಾರೂ ತಮ್ಮೊಂದಿಗೆ ಮಾತನಾಡಿಲ್ಲ ಎಂದು ವಿಜಯ್ ಮತ್ತು ಕರುಣ್ ಈಚೆಗೆ ಹೇಳಿಕೆ ನೀಡಿದ್ದರು.

ADVERTISEMENT

‘ತಂಡದ ಮುಖ್ಯ ಆಯ್ಕೆದಾರ ಕೋಚ್ ರವಿಶಾಸ್ತ್ರಿ. ಅವರು ಮತ್ತು ನಾಯಕ ವಿರಾಟ್ ಹಾಗೂ ತಂಡದ ಹಿರಿಯ ಆಟಗಾರರು ಸೇರಿ ತಂಡದ ರೂಪುರೇಷೆ ಸಿದ್ಧಗೊಳಿಸಿ ಆಯ್ಕೆ ಸಮಿತಿಗೆ ನೀಡುತ್ತಾರೆ. ಅದನ್ನು ಸಮಿತಿಯು ಪರಿಶೀಲಿಸುತ್ತದೆ.ಆದರೆ ಇಲ್ಲಿ ಶಾಸ್ತ್ರಿ ಮತ್ತು ಕೊಹ್ಲಿ ಅವರಿಗೆ ಇರುವಷ್ಟು ಅನುಭವ ಸಮಿತಿ ಸದಸ್ಯರಿಗೆ ಇಲ್ಲ. ಇದರಿಂದಾಗಿ ತಂಡದ ಆಗತ್ಯತೆಗಳು ಕೋಚ್ ಮತ್ತು ನಾಯಕನಿಗೆ ಚೆನ್ನಾಗಿ ಗೊತ್ತಿರುತ್ತವೆ ಎಂಬ ಅಭಿಪ್ರಾಯದೊಂದಿಗೆ ಕ್ರಮ ಕೈಗೊಳ್ಳುತ್ತದೆ‘ ಎಂದಿದ್ದಾರೆ.

‘ಆಯ್ಕೆ ಪ್ರಕ್ರಿಯೆಯಲ್ಲಿ ಅದೃಷ್ಟದ ಲೆಕ್ಕಾಚಾರವೂ ಇರುತ್ತದೆ. ಅದಕ್ಕೆ ನಾನೇ ಪ್ರಮುಖ ನಿದರ್ಶನ. ನಾನು ಉತ್ತಮ ಫಾರ್ಮ್‌ನಲ್ಲಿದ್ದಾಗಲೇ ತಂಡದಿಂದ ಸ್ಥಾನ ಕಳೆದುಕೊಳ್ಳಬೇಕಾಯಿತು’ ಎಂದು ಸ್ಮರಿಸಿದ್ದಾರೆ.

ಬೆಂಗಳೂರಿನ ಕಿರ್ಮಾನಿ ಅವರು ಭಾರತ ತಂಡದ ಶ್ರೇಷ್ಠ ವಿಕೆಟ್‌ಕೀಪರ್‌ಗಳಲ್ಲಿ ಅಗ್ರಮಾನ್ಯರು. ಕೆಲವು ವರ್ಷಗಳ ಹಿಂದೆ ಆಯ್ಕೆ ಸಮಿತಿ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು.

ಎಂ.ಎಸ್‌.ಕೆ. ಪ್ರಸಾದ್ ಆರು ಟೆಸ್ಟ್, 17 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಸದಸ್ಯರಾದ ಸರಣ್‌ದೀಪ್ ಸಿಂಗ್ ಎರಡು ಟೆಸ್ಟ್, ಐದು ಏಕದಿನ, ದೇವಾಂಗ್ ಗಾಂಧಿ ನಾಲ್ಕು ಟೆಸ್ಟ್, ಮೂರು ಏಕದಿನ, ಜತಿನ್ ಪರಾಂಜಪೆ ನಾಲ್ಕು ಏಕದಿನ ಮತ್ತು ಗಗನ್ ಖೋಡಾ ಎರಡು ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕುರಿತು ಪ್ರತಿಕ್ರಿಯಿಸಿದ ಕಿರ್ಮಾನಿ, ‘ಅವರು ಆಂತರರಾಷ್ಟ್ರೀಯ ಕ್ರಿಕೆಟ್‌ಗೆ ಇದೀಗ ಹೆಜ್ಜೆ ಇಟ್ಟಿದ್ದಾರೆ. ಸತತ ಪರಿಶ್ರಮ ಮತ್ತು ಶ್ರದ್ಧೆಯಿಂದ ಆಡಬೇಕು. ಅದರೊಂದಿಗೆ ಕೌಶಲಗಳನ್ನು ಉತ್ತಮಪಡಿಸಿಕೊಂಡರೆ ಉತ್ತಮ ಭವಿಷ್ಯ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.