ADVERTISEMENT

ಚಂಡಮಾರುತ: ಬಾರ್ಬಾಡೋಸ್‌ನಲ್ಲಿಯೇ ಬೀಡುಬಿಟ್ಟ ಭಾರತ ತಂಡ

ಪಿಟಿಐ
Published 1 ಜುಲೈ 2024, 16:25 IST
Last Updated 1 ಜುಲೈ 2024, 16:25 IST
ಜಯ್‌ ಶಾ ಮತ್ತು ರೋಹಿತ್ ಶರ್ಮಾ 
ಜಯ್‌ ಶಾ ಮತ್ತು ರೋಹಿತ್ ಶರ್ಮಾ    

ಬ್ರಿಜ್‌ಟೌನ್, ಬಾರ್ಬಾಡೋಸ್: ಟಿ20 ವಿಶ್ವಕಪ್ ವಿಜೇತ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ತವರು ದೇಶಕ್ಕೆ ಬಂದು ವಿಜಯೋತ್ಸವ ಆಚರಿಸಲು ಇನ್ನೂ ಸ್ವಲ ಸಮಯ ಕಾಯಬೇಕಿದೆ.

ಕೆರೀಬಿಯನ್ ದ್ವೀಪಗಳಲ್ಲಿ ಸೋಮವಾರ ಬೆಳಗಿನ ಜಾವದಲ್ಲಿ ಕೆಟಗರಿ 4 ಚಂಡಮಾರುತವು ಬೀಸುತ್ತಿರುವುದರಿಂದ ವಿಮಾನಯಾನವೂ ಸೇರಿದಂತೆ ಎಲ್ಲ ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೂಡ ಮುಚ್ಚಲಾಗಿದೆ.

ಬಾರ್ಬಾಡೋಸ್ ಮತ್ತು ಸುತ್ತಮುತ್ತಲಿನ ದ್ವೀಪಗಳಲ್ಲಿ ಬಿರುಗಾಳಿಯ ತೀವ್ರತೆಯು ಅಪಾಯಕಾರಿ ಮಟ್ಟದಲ್ಲಿದೆ. 3 ಲಕ್ಷ ಜನಸಂಖ್ಯೆ ಇರುವ ಈ ದ್ವೀಪದೇಶದಲ್ಲಿ ಭಾನುವಾರ ಸಂಜೆಯಿಂದಲೇ ಲಾಕ್‌ಡೌನ್ ವಿಧಿಸಲಾಗಿದೆ. 

ADVERTISEMENT

ಶನಿವಾರ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಜಯಿಸಿ ಟ್ರೋಫಿ ಗೆದ್ದಿತ್ತು. 

‘ನಿಮ್ಮಂತೆಯೇ ನಾವು ಇಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಮೊದಲಿಗೆ ಆಟಗಾರರು ಮತ್ತಿತರರನ್ನು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುವುದು ಆದ್ಯತೆಯಾಗಿದೆ. ಸ್ವದೇಶಕ್ಕೆ ಹೋದ ನಂತರ ಸನ್ಮಾನದ ಬಗ್ಗೆ ಯೋಚಿಸಬಹುದು’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಬಿಸಿಸಿಐ ಉನ್ನತ ಪದಾಧಿಕಾರಿಗಳು ಮತ್ತು ಭಾರತ ತಂಡದ ಆಟಗಾರರು ಸೋಮವಾರ ಭಾರತಕ್ಕೆ ಪ್ರಯಾಣಿಸಬೇಕಿತ್ತು. ಅದಕ್ಕಾಗಿ ಖಾಸಗಿ ವಿಮಾನ ವ್ಯವಸ್ಥೆಯನ್ನೂ ಮಂಡಳಿಯು ಯೋಜಿಸಿದೆ. ಆದರೆ ವಿಮಾನ ನಿಲ್ದಾಣವನ್ನೇ ಮುಚ್ಚಿರುವುದರಿಂದ ಪ್ರಯಾಣ ಅಸಾಧ್ಯವಾಗಿದೆ. 

ಭಾರತದಿಂದ ತೆರಳಿರುವ ಮಾಧ್ಯಮ ಪ್ರತಿನಿಧಿಗಳನ್ನೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಬಿಸಿಸಿಐ ಪ್ರಯತ್ನಿಸುತ್ತಿದೆ. 

‘ಚಾರ್ಟರ್‌ ವಿಮಾನವನ್ನು ಸಿದ್ಧಗೊಳಿಸಲು ಯೋಜಿಸಿದ್ದೆವು. ಆದರೆ ವಿಮಾನ ನಿಲ್ದಾಣ ಮುಚ್ಚಲಾಗಿದೆ. ಖಾಸಗಿ ವಿಮಾನ ಸೇವೆ ಒದಗಿಸುವ ಬೇರೆ ಬೇರೆ ಕಂಪೆನಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಆದರೆ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರವಷ್ಟೇ ಎಲ್ಲವೂ ಸ್ಪಷ್ಟವಾಗಲಿದೆ. ನೇರವಾಗಿ ಭಾರತಕ್ಕೆ ಪ್ರಯಾಣಿಸುವುದು ನಮ್ಮ ಉದ್ಧೇಶ. ಇಂಧನ ಭರ್ತಿಗಾಗಿ ಅಮೆರಿಕ ಅಥವಾ ಯುರೋಪ್‌ನಲ್ಲಿ ವಿಮಾನ ಇಳಿಯಬಹುದಷ್ಟೇ. ಆದರೆ ಮಂಗಳವಾರದವರೆಗೂ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವುದಿಲ್ಲ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರೋಹಿತ್ ಶರ್ಮಾ  ನಾಯಕತ್ವದ ಭಾರತ ತಂಡದ ಆಟಗಾರರು ಪಂಚತಾರಾ ಹೋಟೆಲ್‌ ನಲ್ಲಿ ಸುರಕ್ಷಿತವಾಗಿದ್ದಾರೆಂದೂ ಮೂಲಗಳು ತಿಳಿಸಿವೆ.‘

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.