ADVERTISEMENT

ಆತ ವಿಸ್ಮಯಕಾರಿ ಬ್ಯಾಟ್ಸ್‌ಮನ್: ಡೇಲ್ ಸ್ಟೇಯ್ನ್ ಹೀಗೆ ಹೇಳಿದ್ದು ಯಾರ ಬಗ್ಗೆ?

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 11:03 IST
Last Updated 20 ಮಾರ್ಚ್ 2020, 11:03 IST
   

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಡೇಲ್ ಸ್ಟೇಯ್ನ್‌, ವಿಶ್ವ ಕ್ರಿಕೆಟ್‌ನಲ್ಲಿ ಸದ್ಯದ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. 2004ರಲ್ಲಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, ಕಳೆದ ವರ್ಷ ಫೆಬ್ರುವರಿಯಲ್ಲಿ ಶ್ರೀಲಂಕಾ ವಿರುದ್ಧ ಆಡಿದ ಟೆಸ್ಟ್‌ ಸರಣಿ ಬಳಿಕ ವಿದಾಯ ಹೇಳಿದ್ದಾರೆ.

93 ಟೆಸ್ಟ್‌ ಪಂದ್ಯಗಳಿಂದ 439 ವಿಕೆಟ್‌ ಪಡೆದಿದ್ದಾರೆ. 125 ಏಕದಿನ ಹಾಗೂ 47 ಟಿ20 ಪಂದ್ಯಗಳನ್ನು ಆಡಿರುವ ಅವರು ಕ್ರಮವಾಗಿ 196 ಮತ್ತು 64 ವಿಕೆಟ್‌ ಉರುಳಿಸಿದ್ದಾರೆ. ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಕಣಕ್ಕಿಳಿಯುವ 36 ವಯಸ್ಸಿನ ವೇಗಿ, ಸಹ ಆಟಗಾರಎಬಿಡಿ ವಿಲಿಯರ್ಸ್‌ ನನ್ನ ನೆಚ್ಚಿನ ಆಟಗಾರ ಎಂದು ಹೇಳಿಕೊಂಡಿದ್ದಾರೆ. ಇದೇ ತಿಂಗಳು29ರಿಂದ ಆರಂಭವಾಗಬೇಕಿದ್ದ ಟೂರ್ನಿಯನ್ನು ಕೋವಿಡ್‌–19 ಭೀತಿಯಿಂದಾಗಿ ಏಪ್ರಿಲ್‌ 15ರ ವರೆಗೆ ಮುಂದೂಡಲಾಗಿದೆ.

ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿಲಿಯರ್ಸ್‌, ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವ ಆಲೋಚನೆಯಲ್ಲಿದ್ದಾರೆ. ಅವರನ್ನು ವಾಪಸ್‌ ಕರೆಸಿಕೊಳ್ಳುವ ಪ್ರಯತ್ನಗಳೂ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಲ್ಲಿ ನಡೆಯುತ್ತಿವೆ.

ADVERTISEMENT

ವಿಲಿಯರ್ಸ್ ಕುರಿತು ಮಾತನಾಡಿರುವ ಸ್ಟೇಯ್ನ್‌, ‘ಎಬಿಡಿ ವಿಲಿಯರ್ಸ್‌ ನನ್ನ ನೆಚ್ಚಿನ ಕ್ರಿಕೆಟಿಗ. ಆತ ವಿಸ್ಮಯಕಾರಿ ಬ್ಯಾಟ್ಸ್‌ಮನ್ ಮತ್ತು ಒಳ್ಳೆಯ ಸ್ನೇಹಿತ’ ಎಂದಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿ ಸಲುವಾಗಿ ದಕ್ಷಿಣ ಆಫ್ರಿಕಾ ತಂಡ ಇತ್ತೀಚೆಗೆ ಭಾರತ ಪ್ರವಾಸ ಕೈಗೊಂಡಿತ್ತು. ಆದರೆ, ಕೋವಿಡ್‌–19ನಿಂದಾಗಿ ಟೂರ್ನಿಯನ್ನು ರದ್ದುಗೊಳಿಸಲಾಯಿತು. ಹೀಗಾಗಿ ಕಳೆದವಾರವಷ್ಟೇ ತವರಿಗೆ ಮರಳಿದ ಆಫ್ರಿಕಾ ಆಟಗಾರರು ತಾವಾಗಿಯೇ ಪ್ರತ್ಯೇಕವಾಸದಲ್ಲಿರಲು ನಿರ್ಧರಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಕ್ವಿಂಟನ್‌ ಡಿ ಕಾಕ್‌ ಅವರಂತಹ ಆಟಗಾರರೊಂದಿಗೆ ಪ್ರತ್ಯೇಕವಾಸದಲ್ಲಿ ಇರುವುದನ್ನು ಇಷ್ಟಪಡುವುದಾಗಿಹೇಳಿದ್ದಾರೆ. ಕ್ವಿಂಟನ್‌ ಒಳ್ಳೆಯ ಬಾಣಸಿಗರಾಗಿರುವುದೇ ಅದಕ್ಕೆ ಕಾರಣ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.