ADVERTISEMENT

ಕ್ರಿಕೆಟಿಗ ದತ್ತಾಜಿರಾವ್ ಗಾಯಕವಾಡ ಇನ್ನಿಲ್ಲ

ಪಿಟಿಐ
Published 13 ಫೆಬ್ರುವರಿ 2024, 13:40 IST
Last Updated 13 ಫೆಬ್ರುವರಿ 2024, 13:40 IST
ದತ್ತಾಜಿರಾವ್ ಗಾಯಕವಾಡ್
ದತ್ತಾಜಿರಾವ್ ಗಾಯಕವಾಡ್   

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದ ದತ್ತಾಜಿರಾವ್ ಗಾಯಕವಾಡ (95) ಅವರು ಮಂಗಳವಾರ ಬರೋಡಾದಲ್ಲಿ ನಿಧನರಾದರು. 

ದಿವಂಗತ ವಿಜಯ ಹಜಾರೆ ಅವರ ಸಮಕಾಲೀನರಾಗಿದ್ದ ದತ್ತಾಜಿರಾವ್ ಅವರು ಭಾರತ ತಂಡವನ್ನು 11 ಟೆಸ್ಟ್‌ಗಳಲ್ಲಿ ಪ್ರತಿನಿಧಿಸಿದ್ದರು.  ಎಂದು ಅವರನ್ನು ಕರೆಯಲಾಗುತ್ತದೆ. ಹಜಾರೆಯವರಷ್ಟೇ ಕೌಶಲಪೂರ್ಣ  ಬ್ಯಾಟರ್ ಕೂಡ ಆಗಿದ್ದರು.

ಮೂಲತಃ ಬರೋಡಾದವರೇ ಆದ ದತ್ತಾಜಿರಾವ್ 1950ರಲ್ಲಿ ತಮ್ಮ ಕವರ್ ಡ್ರೈವ್‌ಗಳಿಂದ ಮುಂಬೈನಂತಹ ಬಲಿಷ್ಠ ತಂಡಗಳಿಗೆ ಸಿಂಹಸ್ವಪ್ನರಾಗಿದ್ದರು. ಇಂಗ್ಲೆಂಡ್ ಕ್ರಿಕೆಟ್ ಲೇಖಕ ಕ್ರಿಸ್ಟೋಫರ್ ಮಾರ್ಟಿನ್–ಜೆಂಕಿನ್ಸ್ ಅವರು ದತ್ತಾಜಿರಾವ್ ಕವರ್‌ ಡ್ರೈವ್‌ಗಳನ್ನು ‘ಅಹ್ಲಾದಕರ’ ಎಂದು ಬಣ್ಣಿಸಿದ್ದರು.

ADVERTISEMENT

ಆದರೆ 1952 ರಿಂದ 1961ರವರೆಗೆ ರಾಷ್ಟ್ರೀಯ ತಂಡದಲ್ಲಿ ಅವರು ಹೆಚ್ಚು ರನ್ (352) ಗಳಿಸಲಿಲ್ಲ. 110 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 5788 ರನ್ ಗಳಿಸಿದರು. ಬರೋಡ ತಂಡವು 1957–58ರಲ್ಲಿ ಜಯಗಳಿಸಲು ಅವರ ಆಟವೇ ಪ್ರಧಾನವಾಗಿತ್ತು. ಆ ಋತುವಿನಲ್ಲಿ ಸರ್ವಿಸಸ್‌ ವಿರುದ್ಧ ಶತಕ ಬಾರಿಸಿದ್ದರು.

50ರ ದಶಕದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದತ್ತಾಜಿ ಮತ್ತು ವಿಜಯ್ ಹಜಾರೆ ಅವರ ನಡುವಣ ‘ಪೈಪೋಟಿ‘ ಇತ್ತು.  ರಣಜಿ ಫೈನಲ್‌ನಲ್ಲಿ ದತ್ತಾಜಿ ಶತಕ ಗಳಿಸಿದರು. ಆದರೆ, ಅದೇ ಪಂದ್ಯದಲ್ಲಿ ಹಜಾರೆ ಅವರು ದ್ವಿಶತಕ ಗಳಿಸಿದ್ದರು. ಸೆಮಿಫೈನಲ್‌ನಲ್ಲಿಯೂ ಹೋಳ್ಕರ್ ವಿರುದ್ಧದ ಪಂದ್ಯದಲ್ಲಿ ದತ್ತಾಜಿ 145 ರನ್ ಗಳಿಸಿದ್ದರು. 

ಒಂದು ಬಾರಿ ಮುಂಬೈ  ಎದುರಿನ ಪಂದ್ಯದಲ್ಲಿ ದತ್ತಾಜಿ ದ್ವಿಶತಕ ಗಳಿಸಿದ್ದರು. ಆದರೇ ಅದೇ ಪಂದ್ಯದಲ್ಲಿ ಹಜಾರೆ ಅವರು ಗಳಿಸಿದ್ದ 126 ರನ್‌ಗಳ ಇನಿಂಗ್ಸ್‌ ಈಗಲೂ ಸ್ಮರಣೀಯವಾಗಿದೆ.

1952ರಲ್ಲಿ ದತ್ತಾಜಿ ಅವರು ಲೀಡ್ಸ್‌ನಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು.  1959ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಐದು ಟೆಸ್ಟ್‌ಗಳಲ್ಲಿ ನಾಲ್ಕರಲ್ಲಿ ದತ್ತಾಜಿರಾವ್ ಆಡಿದ್ದರು. 1961ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್‌ ಪಂದ್ಯದಲ್ಲಿ ಅವರು ಕೊನೆಯ ಬಾರಿ ಆಡಿದ್ದರು.

ರಣಜಿ ಕ್ರಿಕೆಟ್‌ನಲ್ಲಿ ಬರೋಡಾ ತಂಡವನ್ನು 1947 ರಿಂದ 1961ರವರೆಗೆ ಪ್ರತಿನಿಧಿಸಿದ್ದರು. 47.56ರ ಸರಾಸಿಯಲ್ಲಿ 3139 ರನ್‌ ಗಳಿಸಿದ್ದರು. ಅದರಲ್ಲಿ 14 ಶತಕಗಳಿದ್ದವು. ಮಹಾರಾಷ್ಟ್ರ ಎದುರು ಅವರು ಗಳಿಸಿದ್ದ 249 ರನ್ ವೈಯಕ್ತಿಕ ಗರಿಷ್ಠ ಸ್ಕೋರ್.

ಅವರ ಮಗ ಅನ್ಷುಮನ್ ಗಾಯಕವಾಡ 1970 ರಿಂದ 80ರವರೆಗೆ ಭಾರತ ತಂಡದಲ್ಲಿ 40 ಟೆಸ್ಟ್ ಆಡಿದರು. ಅನ್ಷುಮನ್  ಅವರು ತಮ್ಮ ತಂದೆಗಿಂತಲೂ ರಕ್ಷಣಾತ್ಮಕ ಬ್ಯಾಟಿಂಗ್‌ನಲ್ಲಿ ಉತ್ತಮವಾಗಿದ್ದರು.

ದತ್ತಾಜಿಯವರು ಹಳೆಯ ತಲೆಮಾರಿನ ಕ್ರಿಕೆಟ್‌ನ ಪ್ರಮುಖ ಕೊಂಡಿಯಾಗಿದ್ದರು. ಇದುವರೆಗೆ ಬದುಕಿದ್ದ ಅತ್ಯಂತ ಹಿರಿಯ ಕ್ರಿಕೆಟಿಗ ಅವರಾಗಿದ್ದರು. ಅವರ ನಿಧನದೊಂದಿಗೆ 50ರ ದಶಕದ ಕ್ರಿಕೆಟ್ ಕೊಂಡಿಯೊಂದು ಕಳಚಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.