ADVERTISEMENT

ಕ್ರಿಕೆಟ್‌ಗೆ ಗುಡ್ ಬೈ ಹೇಳಿದ 'ದಾವಣಗೆರೆ ಎಕ್ಸ್‌ಪ್ರೆಸ್' ಆರ್ ವಿನಯ್ ಕುಮಾರ್

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 14:28 IST
Last Updated 26 ಫೆಬ್ರುವರಿ 2021, 14:28 IST
ಆರ್. ವಿನಯ್ ಕುಮಾರ್
ಆರ್. ವಿನಯ್ ಕುಮಾರ್   

ಬೆಂಗಳೂರು: ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಭಾರತದ ಕ್ರಿಕೆಟಿಗ ಹಾಗೂ ಕರ್ನಾಟಕದ ಮಾಜಿ ಮೆಚ್ಚಿನ ನಾಯಕ ಆರ್. ವಿನಯ್ ಕುಮಾರ್ ಅಂತರ ರಾಷ್ಟ್ರೀಯ ಹಾಗೂ ಪ್ರಥಮ ದರ್ಜೆಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಿನಯ್ ಕುಮಾರ್, ಕಳೆದ 25 ವರ್ಷಗಳಲ್ಲಿ ಅನೇಕ ಸ್ಟೇಷನ್‌ಗಳನ್ನು ಹಾದು ಹೋಗಿರುವ ದಾವಣಗೆರೆ ಎಕ್ಸ್‌ಪ್ರೆಸ್, ಕೊನೆಗೂ ನಿವೃತ್ತಿ ಎಂಬ ಸ್ಟೇಷನ್‌ಗೆ ತಲುಪಿದೆ. ಮಿಶ್ರ ಭಾವನೆಗಳೊಂದಿಗೆ ಈ ಮುಖಾಂತರ ಅಂತರ ರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇದೊಂದು ಸುಲಭವಾದ ನಿರ್ಧಾರವಾಗಿರಲಿಲ್ಲ. ಆದರೆ ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಂತೆ ನನ್ನ ಜೀವನದಲ್ಲೂ ಆ ದಿನ ಬಂದಿದೆ ಎಂದು ಭಾವುಕ ಸಂದೇಶದಲ್ಲಿ ತಿಳಿಸಿದರು.

ಕ್ರಿಕೆಟ್‌ನ ಗರಿಷ್ಠ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅದೃಷ್ಟ ನನಗೆ ದೊರಕಿದ್ದು, ನನ್ನಿಂದಾಗುವ ಸರ್ವಸ್ವವನ್ನು ನೀಡಿದ್ದೇನೆ. ನನ್ನ ಕ್ರೀಡಾ ಜೀವನ ಜೀವನದುದ್ಧಕ್ಕೂ ನೆನಪಿಸುವ ಅನೇಕ ಘಟನೆಗಳಿಂದ ತುಂಬಿಕೊಂಡಿದೆ. ನನ್ನ ಕನಸು ನನಸಾಗಿಸಲು ದಾವಣಗೆರೆಯಿಂದ ಬೆಂಗಳೂರಿಗೆ ಆಗಮಿಸಿದ್ದೆ. ರಾಜ್ಯ ತಂಡವನ್ನು ಪ್ರತಿನಿಧಿಸಲು ಅವಕಾಶ ಮಾಡಿಕೊಟ್ಟ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನಾನು ಅಭಾರಿಯಾಗಿದ್ದೇನೆ. ಅಲ್ಲಿಂದ ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿ ಎಲ್ಲ ಪ್ರಕಾರದಲ್ಲೂ ದೇಶವನ್ನು ಪ್ರತಿನಿಧಿಸಿದ್ದೇನೆ.

ಈ ಸಂದರ್ಭದಲ್ಲಿ ಬಿಸಿಸಿಐಗೂ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ. ದೇಶದ ಪರ ಆಡುವುದು ಪತಿಯೊಬ್ಬ ಕ್ರೀಡಾಪಟುವಿನ ಕಟ್ಟಕಡೆಯ ಕನಸಾಗಿದೆ. ಅದನ್ನು ಸಾಧಿಸಲು ಸಾಧ್ಯವಾಗಿರುವುದು ಸಂತಸ ತಂದಿದೆ. ಭಾರತ ತಂಡದ ನೀಲಿ ಜೆರ್ಸಿ ಧರಿಸಿದ ನೆನಪುಗಳು ಸದಾ ನನ್ನ ಹೃದಯಕ್ಕೆ ಹತ್ತಿರವಾಗಿದೆ.

ಕ್ರಿಕೆಟ್ ಎಂಬುದನ್ನು ನನ್ನ ಪಾಲಿಗೆ ಆಟ ಮಾತ್ರವಾಗಿರಲಿಲ್ಲ. ಅದು ನನ್ನ ಜೀವನ. ಅನೇಕ ಅಂಶಗಳನ್ನು ಕ್ರಿಕೆಟ್ ನನಗೆ ಕಲಿಸಿದೆ. ಏರಿಳಿತಗಳು, ಯಶಸ್ಸು- ವೈಫಲ್ಯ, ಒಳ್ಳೆಯ ದಿನಗಳು, ಕೆಟ್ಟ ದಿನಗಳು. ಇವೆಲ್ಲವೂ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆದು ಬರುವಲ್ಲಿ ನೆರವಾಗಿದೆ. ಓರ್ವ ಕ್ರಿಕೆಟಿಗನಾಗಿ ಸಾಧಿಸಿರುವ ಎಲ್ಲ ಅನುಭವಗಳ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಕೊಚ್ಚಿ ಟಸ್ಕರ್ಸ್ ಐಪಿಎಲ್ ಫ್ರಾಂಚೈಸಿಗಳಿಗೂ ವಿನಯ್ ಕುಮಾರ್ ಧನ್ಯವಾದಗಳನ್ನು ಸಲ್ಲಿಸಿದರು.

ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ ಹಾಗೂ ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ ಆಡಿರುವ ತಮ್ಮ ಕ್ರಿಕೆಟಿಂಗ್ ಅನುಭವಗಳು ಸಮೃದ್ಧವಾಗಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಮಾರ್ಗದರ್ಶನವು ಲಭಿಸಿತ್ತು ಎಂದು ಉಲ್ಲೇಖಿಸಿದರು.

ಏತನ್ಮಧ್ಯೆ ಹೆತ್ತವರು, ಪತ್ನಿ ರಿಚಾ, ಸ್ನೇಹಿತರು, ಸಹ ಆಟಗಾರರು, ದಾವಣೆಗೆರೆ ಯುನೈಟೆಡ್ ಕ್ರಿಕೆಟರ್ಸ್ ಹಾಗೂ ತರಬೇತುದಾರರ ಕೊಡುಗೆಯನ್ನು ವಿನಯ್ ಕುಮಾರ್ ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.