ಮೆಲ್ಬರ್ನ್: ಇತ್ತೀಚಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದ್ದ ಅನುಭವಿ ಆರಂಭ ಆಟಗಾರ ಡೇವಿಡ್ ವಾರ್ನರ್ ಅವರಿಗೆ ಭಾರತ ವಿರುದ್ಧ ಐದು ಪಂದ್ಯಗಳ ಟಿ–20 ಸರಣಿಗೆ ವಿಶ್ರಾಂತಿ ನೀಡಲು ಆಯ್ಕೆಗಾರರು ನಿರ್ಧರಿಸಿದ್ದಾರೆ.
ವಾರ್ನರ್ ಭಾನುವಾರ ಮುಕ್ತಾಯಗೊಂಡಿದ್ದ ಏಕದಿನ ವಿಶ್ವಕಪ್‌ನಲ್ಲಿ 535 ರನ್ ಗಳಿಸಿದ್ದರು. ಮ್ಯಾಥ್ಯೂ ವೇಡ್ ನೇತೃತ್ವದ ಮೂಲ ತಂಡದಲ್ಲಿ ವಾರ್ನರ್ ಅವರ ಹೆಸರೂ ಇತ್ತು. ವಿಶಾಖಪಟ್ಟಣದಲ್ಲಿ ನ. 23ರಂದು ಆರಂಭವಾಗುವ ಸರಣಿಗೆ ಕಳೆದ ತಿಂಗಳೇ ತಂಡವನ್ನು ಪ್ರಕಟಿಸಲಾಗಿತ್ತು.
ವಾರ್ನರ್ ಅವರು ಸ್ವದೇಶಕ್ಕೆ ಮರಳಲಿದ್ದಾರೆ. ಆಲ್‌ರೌಂಡರ್ ಆರನ್ ಹಾರ್ಡಿ ಅವರು ವಾರ್ನರ್ ಅವರ ಸ್ಥಾನ ತುಂಬಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಹೇಳಿಕೆ ಮಂಗಳವಾರ ತಿಳಿಸಿದೆ.
ಪಾಕಿಸ್ತಾನ ಎದುರಿನ ಟೆಸ್ಟ್ ಸರಣಿ, ದೀರ್ಘ ಮಾದರಿಯ ಟೆಸ್ಟ್‌ನಲ್ಲಿ ತಮ್ಮ ಕೊನೆಯ ಸರಣಿಯಾಗಲಿದೆ. ಆದರೆ ನಿಯಮಿತ ಓವರುಗಳ ಟೂರ್ನಿಯಲ್ಲಿ ಮುಂದುವರಿಯುವುದಾಗಿ ಈ ವರ್ಷದ ಆರಂಭದಲ್ಲಿ ವಾರ್ನರ್ ಸುಳಿವು ನೀಡಿದ್ದರು.
ವಾರ್ನರ್ ಅಲಭ್ಯತೆಯಿಂದಾಗಿ, ವಿಶ್ವಕಪ್ ಗೆದ್ದ ತಂಡದ ಏಳು ಮಂದಿ ಮಾತ್ರ ಭಾರತ ಪ್ರವಾಸದಲ್ಲಿ ಮುಂದುವರಿಯುವಂತಾಗಿದೆ. ಸೀನ್ ಅಬೋಟ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಆ್ಯಡಂ ಜಂಪಾ ಈ ಏಳು ಮಂದಿ ಆಟಗಾರರು.
ಸೋಮವಾರ ರಾತ್ರಿ ಭಾರತ ಈ ಸರಣಿಗೆ ತನ್ನ ತಂಡವನ್ನು ಪ್ರಕಟಿಸಿದೆ. ವಿಶ್ವಕಪ್‌ನಲ್ಲಿ ಆಡಿದ್ದ ತಂಡದ ಮೂವರು ಮಾತ್ರ ಟಿ–20 ತಂಡದಲ್ಲಿ ಇರಲಿದ್ದಾರೆ. ಅವರೆಂದರೆ ನಾಯಕನಾಗಿ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಪ್ರಸಿದ್ಧ ಕೃಷ್ಣ. ಶ್ರೇಯಸ್ ಅಯ್ಯರ್ ಅವರು ಕೊನೆಯ ಎರಡು ಪಂದ್ಯಗಳಿಗೆ (ರಾಯಪುರ ಮತ್ತು ಬೆಂಗಳೂರು) ಲಭ್ಯರಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.