ಪರ್ತ್: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ತಮ್ಮ ವಿದಾಯದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ದಾಖಲಿಸಿದರು.
ಗುರುವಾರ ಆರಂಭವಾದ ಪಾಕಿಸ್ತಾನ ಎದುರಿನ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ವಾರ್ನರ್ 211 ಎಸೆತಗಳಲ್ಲಿ 164 ರನ್ ಗಳಿಸಿದರು. ಇದರಿಂದಾಗಿ ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯಾ ತಂಡವು 84 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 346 ರನ್‌ಗಳ ದೊಡ್ಡ ಮೊತ್ತ ದಾಖಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ಪ್ಯಾಟ್ ಕಮಿನ್ಸ್ ನಿರ್ಧಾರವನ್ನು ವಾರ್ನರ್ ಸಮರ್ಥಿಸಿಕೊಂಡರು.
37 ವರ್ಷದ ವಾರ್ನರ್ ಅವರು ಈ ಸರಣಿಯ ಕೊನೆಯ ಪಂದ್ಯದ ನಂತರ ವಿದಾಯ ಹೇಳಲಿದ್ದಾರೆ. ಪ್ರಸಕ್ತ ವರ್ಷದಲ್ಲಿ ಇದು ಅವರಿಗೆ ಮೊದಲ ಶತಕ. ಒಟ್ಟಾರೆ ಟೆಸ್ಟ್ ಮಾದರಿಯಲ್ಲಿ ಅವರಿಗೆ ಇದು 26ನೇ ಶತಕವಾಗಿದೆ.
200ನೇ ಇನಿಂಗ್ಸ್ ಆಡಿದ ವಾರ್ನರ್, ಪಾಕ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಉಸ್ಮಾನ್ ಖ್ವಾಜಾ (41 ರನ್) ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 126 ರನ್ ಸೇರಿಸಿ ಭದ್ರ ಬುನಾದಿ ಹಾಕಿದರು. ವೇಗಿ ಶಾಹೀನ್ ಆಫ್ರಿದಿ ಅವರು ಉಸ್ಮಾನ್ ವಿಕೆಟ್ ಗಳಿಸಿ ಜೊತೆಯಾಟವನ್ನು ಮುರಿದರು. ಮಾರ್ನಸ್ ಲಾಬುಷೇನ್ 25 ಎಸೆತಗಳಲ್ಲಿ 16 ರನ್ ಗಳಿಸಿ ಅಹೀಮ್ ಅಶ್ರಫ್ ಬೌಲಿಂಗ್‌ನಲ್ಲಿ ಔಟಾದರು. ಈ ಹಂತದಲ್ಲಿ ವಾರ್ನರ್ ಜೊತೆಗೂಡಿದ ಸ್ಟೀವ್ ಸ್ಮಿತ್ (31; 60ಎ) ಲಯ ಕಂಡುಕೊಳ್ಳಲು ಪ್ರಯಾಸಪಟ್ಟರು. ಇವರಿಬ್ಬರೂ ಮೂರನೇ ವಿಕೆಟ್ ಜೊತೆಯಾಟದಲ್ಲಿ 79 ರನ್ ಸೇರಿಸಿದರು.
ಸ್ಮಿತ್ ಔಟಾದ ನಂತರ ಮೇಲೆ ಟ್ರಾವಿಸ್ ಹೆಡ್ (40; 53ಎ) ಅರ್ಧಶತಕದ ಸನಿಹ ಔಟಾದರು. ಹೆಡ್ ಮತ್ತು ವಾರ್ನರ್ 66 ರನ್ ಸೇರಿಸಿದರು. ಹೆಡ್ ಔಟಾಗಿ ಮೂರು ಓವರ್‌ಗಳ ನಂತರ ವಾರ್ನರ್ ಕೂಡ ಪೆವಿಲಿಯನ್‌ಗೆ ಮರಳಿದರು. ಪಾಕ್ ತಂಡದಲ್ಲಿ ಪದಾರ್ಪಣೆ ಮಾಡಿದ ವೇಗಿ ಅಮಿರ್ ಜಮಾಲ್ ಅವರು ವಾರ್ನರ್ ಮತ್ತು ಹೆಡ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಇದೇ ಪಂದ್ಯದಲ್ಲಿ ಖುರ್ರಂ ಶೆಹಜಾದ್ ಕೂಡ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
ಸಂಕ್ಷಿಪ್ತ ಸ್ಕೋರು:
ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 84 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 346 (ಡೇವಿಡ್ ವಾರ್ನರ್ 164, ಉಸ್ಮಾನ್ ಖ್ವಾಜಾ 41, ಸ್ಟೀವ್ ಸ್ಮಿತ್ 31, ಟ್ರಾವಿಸ್ ಹೆಡ್ 40, ಆಮೀರ್ ಜಮಾಲ್ 63ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.