ರಾಜಕೋಟ್: ಬಂಗಾಳ ತಂಡದ ನಂಬಿಗಸ್ಥ ಆಟಗಾರ ಅನು ಷ್ಟುಪ್ ಮಜುಂದಾರ್ ಮತ್ತೊಮ್ಮೆ ಆಪತ್ಬಾಂಧವನಾದರು. ಹೀಗಾಗಿ ಸೌರಾಷ್ಟ್ರ ವಿರುದ್ಧ ರಣಜಿ ಟ್ರೋಫಿ ಫೈನಲ್ ಪಂದ್ಯದ ನಾಲ್ಕನೇ ದಿನವಾದ ಗುರುವಾರ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಲು ಹೋರಾಟ ಜೋರಾಗಿಯೇ ಸಾಗಿ, ಕುತೂಹಲ ಅಂತಿಮ ದಿನಕ್ಕೂ ಮುಂದುವರಿಯಿತು.
ಮೊದಲ ಇನಿಂಗ್ಸ್ ಮುನ್ನಡೆ ನಿರ್ಣಾಯಕವಾಗುವ ಕಾರಣ ಬಂಗಾಳ ಎಚ್ಚರಿಕೆಯ ಆಟಕ್ಕೆ ಮೊರೆಹೋಯಿತು. ಸೌರಾಷ್ಟ್ರದ 425 ರನ್‌ಗಳಿಗೆ ಉತ್ತರ ವಾಗಿ ನಾಲ್ಕನೇ ದಿನದಾಟ ಮುಗಿದಾಗ 6 ವಿಕೆಟ್‌ಗೆ 354 ರನ್ ಗಳಿಸಿತು. ನಾಕೌಟ್ ಪಂದ್ಯಗಳಲ್ಲಿ ಶತಕಗಳನ್ನು ಬಾರಿಸಿದ್ದ ಅನುಷ್ಟುಪ್ ಅಜೇಯ 58 ರನ್ (134 3, 8 ಬೌಂ) ಗಳಿಸಿದ್ದಾರೆ. ಅರ್ಣವ್ ನಂದಿ (ಬ್ಯಾಟಿಂಗ್ 28, 82 ಎ) ಜೊತೆ ಮುರಿಯದ ಏಳನೇ ವಿಕೆಟ್‌ಗೆ 91 ರನ್ ಸೇರಿಸಿ ಬಂಗಾಳದ ಮುನ್ನಡೆ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದ್ದಾರೆ. ಜಯದೇವ ಉನದ್ಕತ್ ಬೌಲಿಂಗ್‌ನಲ್ಲಿ ಬೆರಳಿಗೆ ಏಟು ತಿಂದರೂ ಅರ್ಣವ್ ಕೆಚ್ಚಿನಿಂದಲೇ ಆಟ ಮುಂದುವರಿಸಿದರು.
ಬಂಗಾಳಕ್ಕೆ ಮುನ್ನಡೆ ಪಡೆದು ಟ್ರೋಫಿ ಎತ್ತಲು 72 ರನ್ ಬೇಕು. ಇನ್ನೊಂದೆಡೆ ಬಂಗಾಳದ ನಾಲ್ಕು ವಿಕೆಟ್‌ಗಳನ್ನು ಬೇಗನೇ ಪಡೆದರೆ ಸೌರಾಷ್ಟ್ರ ಆಸೆ ಈಡೇರಲಿದೆ.
ಆತಿಥೇಯರ ಕ್ಷೇತ್ರ ರಕ್ಷಣೆ ಬಿಗುವಾಗಿರಲಿಲ್ಲ. ಟೀ ನಂತರ ಬಂಗಾಳ ಆಟಗಾರರು 90 ರನ್ ಕಲೆಹಾಕಿದರು. ಹರ್ವಿಕ್ ದೇಸಾಯಿಮೊದಲ ಸ್ಲಿಪ್‌ನಲ್ಲಿ ಬಿಟ್ಟ ಕ್ಯಾಚ್‌ನಿಂದ ಮಜುಂದಾರ್ ಬಚಾ ವಾದರು. ಆಗ ಅವರು 10 ರನ್ ಅಷ್ಟೇ ಗಳಿಸಿದ್ದರು.
3 ವಿಕೆಟ್‌ಗೆ 134 ರನ್‌ಗಳೊಡನೆ ಗುರುವಾರ ಆಟ ಮುಂದುವರಿಸಿದ ಬಂಗಾಳದ ಹೋರಾಟವನ್ನು ಸುದೀಪ್ ಚಟರ್ಜಿ (81, 241 ಎ) ಮತ್ತು ಅನುಭವಿ ವೃದ್ಧಿಮಾನ್ ಸಹಾ (64, 184ಎ) ಮುಂದುವರಿಸಿದರು. ಇವರಿಬ್ಬರು 101 ರನ್ ಜೊತೆಯಾಟವಾಡಿದರು. ಅದಕ್ಕೆ ತೆಗೆದುಕೊಂಡಿದ್ದು 49 ಓವರುಗಳನ್ನು!
ಆತಂಕದ ಕ್ಷಣ: ಕೆಲವೊಮ್ಮೆ ಕೆಳಮಟ್ಟದಲ್ಲಿ ಚೆಂಡು ಹೊರಳುತಿದ್ದ ಪಿಚ್‌ನಲ್ಲಿ ಸೌರಾಷ್ಟ್ರ ಬೌಲರ್‌ಗಳು ಬಿಗುವಾಗಿಯೇ ಬೌಲ್ ಮಾಡಿದರು. ಚಟರ್ಜಿ ಬಂಡೆಗಲ್ಲಿನಂತೆ ಬೇರೂರಿದರೆ, ಟೆಸ್ಟ್ ವಿಕೆಟ್ ಕೀಪರ್ ಸಹಾ ಆತಂಕದಲ್ಲೇ ಕಳೆದರು. ಅವರ ವಿರುದ್ಧ ಎರಡು ಬಾರಿ ಎಲ್‌ಬಿಡಬ್ಲ್ಯು (ಉನದ್ಕತ್ ಬೌಲಿಂಗ್) ಮನವಿಗಳು ತಿರಸ್ಕೃತವಾದವು. ಅವರು 46 ರಲ್ಲಿದ್ದಾಗ ‘ಗಲ್ಲಿ’ಯಲ್ಲಿದ್ದ ಆಟಗಾರ ಕ್ಯಾಚ್ ಬಿಟ್ಟ ಪರಿಣಾಮ ಚೆಂಡು ಬೌಂಡರಿಗೆ ಹೋಗಿ ಅರ್ಧ ಶತಕ ದಾಟಿದರು. ಮತ್ತೊಮ್ಮೆ ರನ್‌ಔಟ್ ಅಪಾಯದಿಂದ ಪಾರಾದರು.
ಲಂಚ್ ನಂತರ ಎಂಟನೇ ಓವರ್ ನಲ್ಲಿ ಸೌರಾಷ್ಟ್ರ ಕೊನೆಗೂ ಯಶಸ್ಸು ಪಡೆಯಿತು. ಜಡೇಜಾ ಬೌಲಿಂಗ್‌ನಲ್ಲಿ ಚಟರ್ಜಿ ಷಾರ್ಟ್‌ಲೆಗ್‌ನಲ್ಲಿ ಕ್ಯಾಚಿತ್ತರು. ಒತ್ತಡ ಹೇರಿದ ಸೌರಾಷ್ಟ್ರ, ಕೆಲವೇ ಹೊತ್ತಿನ ನಂತರ ವೃದ್ಧಿಮಾನ್ ವಿಕೆಟ್ ಸಹ ಪಡೆಯಿತು. ಪ್ರೇರಕ್ ಮಂಕಡ್ ಅವರನ್ನು ಬೌಲ್ಡ್ ಮಾಡಿದರು. ಟೀ ಸಮೀಪಿಸುತ್ತಿದ್ದಂತೆ ಶಾಬಾಜ್ ಅಹ್ಮದ್ (18) ನಿರ್ಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.