ADVERTISEMENT

ಆಟಗಾರರನ್ನು ಉಳಿಸಿಕೊಳ್ಳಲು ಕೊನೆ ದಿನ ನಿಗದಿ: ಬ್ರಿಜೇಶ್ ಪಟೇಲ್

ಫೆಬ್ರುವರಿಯಲ್ಲಿ ಐಪಿಎಲ್ ಆಟಗಾರರ ಮಿನಿ ಹರಾಜು

ಪಿಟಿಐ
Published 7 ಜನವರಿ 2021, 15:47 IST
Last Updated 7 ಜನವರಿ 2021, 15:47 IST
ಬ್ರಿಜೇಶ್ ಪಟೇಲ್
ಬ್ರಿಜೇಶ್ ಪಟೇಲ್   

ನವದೆಹಲಿ: ಮುಂದಿನ ತಿಂಗಳಿನ ಎರಡು ಅಥವಾ ಮೂರನೇ ವಾರದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.

ಆದ್ದರಿಂದ ತಂಡಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳಲಿರುವ (ರಿಟೇನಿಂಗ್) ಆಟಗಾರರ ಅಂತಿಮ ಪಟ್ಟಿಯನ್ನು ಆಡಳಿತ ಸಮಿತಿಗೆ ಸಲ್ಲಿಸಲು ಜನವರಿ 21 ಕೊನೆಯ ದಿನವಾಗಿದೆ. ಆಟಗಾರರ ಟ್ರೇಡಿಂಗ್‌ ವಿಂಡೋ ಫೆಬ್ರುವರಿ 4ರವರೆಗೆ ಇರಲಿದೆ ಎಂದು ಐಪಿಎಲ್ ಆಡಳೀತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

ಈಚೆಗೆ ನಡೆದ ಸಮಿತಿಯ ವರ್ಚುವಲ್ ಸಭೆಯಲ್ಲಿ ಮುಂದಿನ ಐಪಿಎಲ್ ಆಯೋಜನೆಯ ಕುರಿತು ಕೂಲಂಕಷವಾಗಿ ಚರ್ಚಿಸಲಾಯಿತು.

ADVERTISEMENT

’ಫೆಬ್ರುವರಿಯ ಎರಡು ಅಥವಾ ಮೂರನೇ ವಾರದಲ್ಲಿ ಮಿನಿ ಹರಾಜು ನಡೆಸಲು ಯೋಚಿಸಲಾಗುತ್ತಿದೆ. ಎಂಟು ತಂಡಗಳಿಗೂ ಆಟಗಾರರ ರಿಟೇನಷನ್ ಮತ್ತು ಟ್ರೇಡಿಂಗ್‌ ನ ಕೊನೆಯ ದಿನವನ್ನು ತಿಳಿಸಲಾಗಿದೆ. ಈ ಸಲದ ಹರಾಜಿನಲ್ಲಿ ತಂಡಗಳು ₹ 85 ಕೋಟಿ ಪರ್ಸ್ ಮೌಲ್ಯ ಹೊಂದಿರುತ್ತವೆ. ಅದರಲ್ಲಿ ಯಾವುದೇ ಹೆಚ್ಚಳ ಇಲ್ಲ‘ ಎಂದೂ ಪಟೇಲ್ ತಿಳಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ತನ್ನಲ್ಲಿರುವ ದೊಡ್ಡ ಮೊತ್ತದ ಸಂಬಳ ಪಡೆಯುವ ಇಬ್ಬರನ್ನು ತಂಡದಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕೇದಾರ್ ಜಾಧವ್ ಮತ್ತು ಪಿಯೂಷ್ ಚಾವ್ಲಾ ಅವರೇ ಆ ಇಬ್ಬರು ಆಟಗಾರರು ಎನ್ನಲಾಗುತ್ತಿದೆ. ಚೆನ್ನೈ ಪರ್ಸ್‌ನಲ್ಲಿ ₹ 15 ಲಕ್ಷ ಇದೆ.

₹ 1.95 ಕೋಟಿ ಪರ್ಸ್ ಹೊಂದಿರುವ ಮುಂಬೈ ಇಂಡಿಯನ್ಸ್‌ ಯಾವುದೇ ಆಟಗಾರರನನ್ನು ಬಿಟ್ಟುಕೊಡುವ ಸಾಧ್ಯತೆ ಇಲ್ಲ. ಚಾಂಪಿಯನ್ ಆಗಿರುವ ತಂಡವು ಉತ್ತಮವಾಗಿದೆ.

ರಾಜಸ್ಥಾನ್ ರಾಯಲ್ಸ್‌ (₹ 14.75 ಕೋಟಿ), ಸನ್‌ರೈಸರ್ಸ್‌ ಹೈದರಾಬಾದ್ (₹ 10.1 ಕೋಟಿ), ಡೆಲ್ಲಿ ಕ್ಯಾಪಿಟಲ್ಸ್‌ (₹ 9 ಕೋಟಿ), ಕೋಲ್ಕತ್ತ ನೈಟ್ ರೈಡರ್ಸ್‌ (₹ 8.5 ಕೋಟಿ), ರಾಯಲ್ ಚಾಲೆಂಜರ್ಸ್ ಬೆಂಗಳೂರು (₹ 6.4 ಕೋಟಿ) ತಂಡಗಳು ತಮ್ಮಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತವೆ ಎಂಬುದನ್ನು ನೋಡಬೇಕಿದೆ.

ಮುಂದಿನ ಟೂರ್ನಿಯನ್ನು ಭಾರತದಲ್ಲಿಯೇ ಆಯೋಜಿಸುವ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತೆನ್ನಲಾಗಿದೆ.

’ದೇಶದಲ್ಲಿ ಕೋವಿಡ್ –19 ಪ್ರಸರಣದ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಬಹುಶಃ ಇನ್ನೊಂದು ತಿಂಗಳಿನ ನಂತರ ಬಿಸಿಸಿಐ ಈ ಕುರಿತು ನಿರ್ಧಾರ ಕೈಗೊಳ್ಳಬಹುದು. ಭಾರತದಲ್ಲಿಯೇ ಟೂರ್ನಿ ಆಯೋಜನೆಗೊಳ್ಳಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಆದರೆ, ಪರಿಸ್ಥಿತಿಯ ಮೇಲೆ ನಿರ್ಧಾರ ಅವಲಂಬಿತವಾಗಿದೆ‘ ಎಂದು ಪಟೇಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.