ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ್ದಾರೆ.
ಉಮ್ರಾನ್ ನಿಖರ ದಾಳಿಯ ಹೊರತಾಗಿಯೂ ಹೈದರಾಬಾದ್‌ಗೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ರಶೀದ್ ಖಾನ್ ಹಾಗೂ ರಾಹುಲ್ ತೆವಾಟಿಯಾ ಅಬ್ಬರದ ನೆರವಿನಿಂದ ಗುಜರಾತ್ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತ್ತು.
ವೇಗದ ದಾಳಿಯಿಂದಲೇ ಗುಜರಾತ್ ಬ್ಯಾಟರ್‌ಗಳಲ್ಲಿ ನಡುಕ ಸೃಷ್ಟಿಸಿದಉಮ್ರಾನ್, 25 ರನ್ ತೆತ್ತು ಐದು ವಿಕೆಟ್ ಕಬಳಿಸಿದರು. ಈ ಪೈಕಿ ನಾಲ್ವರು ಬ್ಯಾಟರ್‌ಗಳನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು.
ಗುಜರಾತ್ ಬ್ಯಾಟರ್‌ಗಳು ಉಮ್ರಾನ್ ದಾಳಿಗೆ ಪೇಚಾಡಿದರು. ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ನಾಯಕ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್ ಹಾಗೂ ಅಭಿನವ್ ಮನೋಹರ್ ವಿಕೆಟ್ ಗಳಿಸಿದ ಉಮ್ರಾನ್, ಛಾಪು ಒತ್ತಿದರು.
ಗಂಟೆಗೆ ಸರಾಸರಿ 153 ಕಿ.ಮೀ. ವೇಗದ ದಾಳಿಯ ಮೂಲಕ ಸಹಾರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು.
ಈ ಮೂಲಕ ಉಜ್ವಲ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಸುನಿಲ್ ಗವಾಸ್ಕರ್ ಸೇರಿದಂತೆ ಮಾಜಿ ಕ್ರಿಕೆಟಿಗರು ಉಮ್ರಾನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಉಮ್ರಾನ್ ವಿಕೆಟ್ ಪಡೆಯುತ್ತಿದ್ದ ವೇಳೆ ಕಾಮೆಂಟರಿ ಬಾಕ್ಸ್‌ನಲ್ಲಿ ಸುನಿಲ್ ಗವಾಸ್ಕರ್ ಸಂಭ್ರಮಿಸುತ್ತಿದ್ದರು ಎಂದು ವೀಕ್ಷಕ ವಿವರಣೆಗಾರ ಇಂಗ್ಲೆಂಡ್‌ನ ಕೆವಿನ್ ಪೀಟರ್‌ಸನ್ ಹೇಳಿದ್ದಾರೆ.
ಪಂದ್ಯದ ಬಳಿಕ ಪ್ರತಿಕ್ರಿಯಿಸಿರುವ 22 ವರ್ಷದ ಉಮ್ರಾನ್, ವೇಗದ ಜೊತೆಗೆ ಉತ್ತಮ ಲೆಂತ್ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಮುಂದೊಂದು ದಿನ ಗಂಟೆಗೆ 155 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಗುರಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.