ಅಹಮದಾಬಾದ್: ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ಎಂದು ಹೇಳಲಾಗುವ ನವೀಕೃತ ಮೊಟೆರಾ ಕ್ರೀಡಾಂಗದಲ್ಲಿ ಮೂರನೇ ಟೆಸ್ಟ್ ಪಂದ್ಯ ಆಡಲು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸಜ್ಜಾಗಿವೆ. ಬುಧವಾರ ಆರಂಭವಾಗಲಿರುವ ‘ಪಿಂಕ್ ಬಾಲ್’ ಟೆಸ್ಟ್‌ನಲ್ಲಿ (ಹೊನಲು ಬೆಳಕಿನ ಪಂದ್ಯ) ಭಾರತದ ಇಶಾಂತ್ ಶರ್ಮಾ ‘ಶತಕ’ದ ಮೈಲುಗಲ್ಲು ಸ್ಥಾಪಿಸಲು ಸಿದ್ಧವಾಗಿದ್ದಾರೆ.
ಆದರೆ 100ನೇ ಪಂದ್ಯ ಆಡುವುದಕ್ಕಿಂತ, ಈ ಪಂದ್ಯ ಗೆದ್ದು ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ಲಗ್ಗೆ ಇಡುವ ಕನಸು ಜೀವಂತವಾಗಿರಿಸುವುದರ ಬಗ್ಗೆ ಹೆಚ್ಚು ಉತ್ಸುಕನಾಗಿರುವುದಾಗಿ ಇಶಾಂತ್ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದನ್ನು ಗೆದ್ದುಕೊಂಡಿವೆ. ಆದ್ದರಿಂದ ಸರಣಿ ಗೆಲುವಿಗೆ ಮೊಟೆರಾ ಅಂಗಣದ ಪಂದ್ಯದಲ್ಲಿ ಜಯ ಗಳಿಸುವತ್ತ ಎರಡೂ ತಂಡಗಳು ಚಿತ್ತ ಹರಿಸಲಿವೆ. ಈ ಪಂದ್ಯದಲ್ಲಿ ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸುವ ಹಾದಿಯೂ ಸುಗಮವಾಗಲಿದೆ. ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರಲು ಭಾರತ ಈ ಸರಣಿಯಲ್ಲಿ ಜಯ ಗಳಿಸಬೇಕು. ಇಂಗ್ಲೆಂಡ್ 3–1ರಲ್ಲಿ ಗೆಲ್ಲಬೇಕು.
‘ಈಗ ನನ್ನ ಮನಸ್ಸಿನಲ್ಲಿರುವುದು ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಕುರಿತ ವಿಚಾರ ಮಾತ್ರ. ನಾನು ಈಗ ಟೆಸ್ಟ್ ಮಾದರಿಯಲ್ಲಷ್ಟೇ ಆಡುತ್ತಿದ್ದೇನೆ. ಆದ್ದರಿಂದ ಈ ಚಾಂಪಿಯನ್‌ಷಿಪ್ ನನಗೆ ವಿಶ್ವಕಪ್ ಇದ್ದಂತೆ. ಹೀಗಾಗಿ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದರೆ ನನ್ನ ಪಾಲಿಗೆ ವಿಶ್ವಕಪ್ ಗೆಲುವು ಆಗಲಿದೆ’ ಎಂದು 32 ವರ್ಷದ ಇಶಾಂತ್ ಹೇಳಿದರು.
ಕಳೆದ ವರ್ಷ ಫೆಬ್ರುವರಿಯಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಂಡಿದ್ದಾಗ ಸಮಾವೇಶ ಏರ್ಪಡಿಸಿದ್ದ ಮೊಟೆರಾ ಕ್ರೀಡಾಂಗಣದಲ್ಲಿ ಒಂದು ಲಕ್ಷದ 10 ಸಾವಿರ ಆಸನಗಳು ಇವೆ. ಟೆಸ್ಟ್ ಪಂದ್ಯಕ್ಕೆ 50 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಲಿವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಪಿಂಕ್ ಬಾಲ್, ಹೊನಲು ಬೆಳಕಿಗೆ ಬದಲಾಗಿ ಎಲ್‌ಇಡಿ ಬಲ್ಬ್‌ಗಳ ಬೆಳಕು ಮತ್ತು ಕ್ರೀಡಾಂಗಣದ ವಿಸ್ತಾರ ನಿಜಕ್ಕೂ ವಿಶೇಷ ಅನುಭವ ನೀಡಲಿದೆ. ಹೊಸ ಕ್ರೀಡಾಂಗಣದಲ್ಲಿ ಕೆಲವೊಂದು ಸವಾಲನ್ನೂ ಎದುರಿಸಬೇಕಾಗಿದೆ’ ಎಂದು ಭಾರತದ ‘ಹಿಟ್ ಮ್ಯಾನ್’ ರೋಹಿತ್ ಶರ್ಮಾ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.