ADVERTISEMENT

ಮುಂಬೈ ಗೆಲುವಿಗೆ ಕಾಯಿಸಿದ ವಿದರ್ಭ

ರಣಜಿ ಟ್ರೋಫಿ ಫೈನಲ್‌: ಕರುಣ್‌ ನಾಯರ್, ಅಕ್ಷಯ್‌ ಕೆಚ್ಚೆದೆಯ ಆಟ

ಪಿಟಿಐ
Published 13 ಮಾರ್ಚ್ 2024, 23:35 IST
Last Updated 13 ಮಾರ್ಚ್ 2024, 23:35 IST
ಅರ್ಧ ಶತಕ ಗಳಿಸಿದ ವಿದರ್ಭ ಆಟಗಾರರಾದ ಅಕ್ಷಯ್‌ ವಾಡ್ಕರ್ ಮತ್ತು ಕರುಣ್ ನಾಯರ್‌ ರನ್‌ ಗಳಿಸಿದ ಕ್ಷಣ...
ಪಿಟಿಐ ಚಿತ್ರ
ಅರ್ಧ ಶತಕ ಗಳಿಸಿದ ವಿದರ್ಭ ಆಟಗಾರರಾದ ಅಕ್ಷಯ್‌ ವಾಡ್ಕರ್ ಮತ್ತು ಕರುಣ್ ನಾಯರ್‌ ರನ್‌ ಗಳಿಸಿದ ಕ್ಷಣ... ಪಿಟಿಐ ಚಿತ್ರ   

ಮುಂಬೈ: ಕರುಣ್ ನಾಯರ್ (74) ಮತ್ತು ನಾಯಕ ಅಕ್ಷಯ್‌ ವಾಡ್ಕರ್‌ (ಔಟಾಗದೇ 56) ಅವರ ನೇತೃತ್ವದಲ್ಲಿ ಹೋರಾಟ ಪ್ರದರ್ಶಿಸಿದ ವಿದರ್ಭ ತಂಡ, ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಮುಂಬೈ ತಂಡವು 42ನೇ ಪ್ರಶಸ್ತಿಗೆ ಕಾಯುವಂತೆ ಮಾಡಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಗೆಲುವಿಗೆ 538 ರನ್‌ಗಳ ದೊಡ್ಡ ಪರ್ವತ ಏರಬೇಕಿರುವ ವಿದರ್ಭ ಬುಧವಾರ 5 ವಿಕೆಟ್‌ಗೆ 248 ರನ್‌ಗಳೊಡನೆ ನಾಲ್ಕನೇ ದಿನದಾಟ ಪೂರೈಸಿದೆ.

ಅಂತಿಮ ದಿನವಾದ ಗುರುವಾರ ವಿದರ್ಭ ಗೆಲುವಿಗೆ ಬಾಕಿ ಐದು ವಿಕೆಟ್‌ಗಳಿಂದ ಇನ್ನೂ 290 ರನ್‌ಗಳ ದೂರದ ದಾರಿ ಸಾಗಬೇಕಾಗಿದೆ.

ದೊಡ್ಡ ಗುರಿಯೆದುರು ವಿದರ್ಭ ಸುಲಭವಾಗಿ ಮಣಿಯಬಹುದೆಂಬ ಮುಂಬೈ ಲೆಕ್ಕಾಚಾರ ಹುಸಿಯಾಯಿತು. ನೆಲಕಚ್ಚಿ ಆಡಿದ ಬ್ಯಾಟರ್‌ಗಳು ಮುಂಬೈ ಬೌಲರ್‌ಗಳನ್ನು ಹತಾಶಗೊಳಿಸಿ ದಿನದ ಗೌರವ ಸಂಪಾದಿಸಿದರು.

ADVERTISEMENT

ಕರ್ನಾಟಕದಿಂದ ಈ ವರ್ಷ ವಿದರ್ಭಕ್ಕೆ ವಲಸೆ ಹೋಗಿರುವ ನಾಯರ್‌ ಹೋರಾಟದ ಮುಂಚೂಣಿಯಲ್ಲಿದ್ದರು. ಮೂರೇ ಬೌಂಡರಿ ಬಾರಿಸಿದರೂ ಅವರು 287 ನಿಮಿಷ ಆಡಿ (220 ಎಸೆತ) ಮುಂಬೈ ಹಾದಿಗೆ ತಡೆಯಾದರು. ಅವರು ಕೊನೆಗೂ ದಿನದ ಅಂತಿಮ ಅವಧಿಯಲ್ಲಿ ನಿರ್ಗಮಿಸಿದರು. ಅದೂ 19ರ ಹರೆಯದ ಆಲ್‌ರೌಂಡರ್‌ ಮುಷೀರ್‌ ಖಾನ್‌ ಅವರ ಉತ್ತಮ ಎಸೆತಕ್ಕೆ.

ನಾಯಕ ವಾಡ್ಕರ್‌ ಅವರೊಂದಿಗೆ ಹರ್ಷ್‌ ದುಬೆ (11 ಬ್ಯಾಟಿಂಗ್) ಕೊನೆಯ ದಿನದ ಆಟ ಮುಂದುವರಿಸುವರು.

ಮುಂಬೈ ತಂಡ ಮೊದಲ ಎರಡು ಅವಧಿಯಲ್ಲಿ ತಲಾ ಎರಡು ವಿಕೆಟ್‌ ಪಡೆಯಿತು. ಆದರೆ ಅಂತಿಮ ಅವಧಿಯಲ್ಲಿ ಕರುಣ್ ನಾಯರ್‌ ಅವರ ಮಹತ್ವದ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಯಿತು. ಅದೂ 82ನೇ ಓವರ್‌ನಲ್ಲಿ ಹೊಸ ಚೆಂಡನ್ನು ಪಡೆದ ಬಳಿಕ.

ಮುಂಬೈನ ವೇಗದ ಬೌಲರ್‌ಗಳಾದ ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್, ತುಷಾರ ದೇಶಪಾಂಡೆ ಅಷ್ಟೇನೂ ಪರಿಣಾಮ ಬೀರಲಿಲ್ಲ.  ಆದರೆ ಸ್ಪಿನ್ನರ್‌ಗಳು ಸ್ವಲ್ಪ ಯಶಸ್ಸು ಸಾಧಿಸಿದರು. ಎಡಗೈ ಸ್ಪಿನ್ನರ್‌ ಮುಷೀರ್ ಪರಿಣಾಮಕಾರಿ ಆಗಿದ್ದು 17 ಓವರುಗಳಲ್ಲಿ 24 ರನ್ನಿಗೆ 2 ವಿಕೆಟ್‌ ಪಡೆದರು. ಕರುಣ್ ಕೂಡ ಅವರ ಉತ್ತಮ ಬೌಲಿಂಗ್‌ಗೆ ನಿರ್ಗಮಿಸಿದರು. ಮಿಡ್ಲ್‌ ಮತ್ತು ಲೆಗ್‌ ಸ್ಟಂಪ್‌ ನೇರದಲ್ಲಿ ಪಿಚ್‌ ಆದ ಚೆಂಡು ತಿರುವು ಪಡೆದಾಗ ಕರುಣ್ ರಕ್ಷಣಾತ್ಮಕವಾಗಿ ಆಡಿದರು. ಆದರೆ ಬ್ಯಾಟಿನಂಚಿಗೆ ಬಡಿದ ಚೆಂಡು ವಿಕೆಟ್‌ ಕೀಪರ್‌ ತಮೋರೆ ಕೈಸೇರಿತು. ಆಫ್‌ ಸ್ಪಿನ್ನರ್ ತನುಷ್‌ ಕೋಟ್ಯಾನ್‌ 19 ಓವರುಗಳಲ್ಲಿ ಎರಡು ವಿಕೆಟ್‌ ಪಡೆದರು.

ಆರಂಭ ಆಟಗಾರ ಅಥರ್ವ ತೈಡೆ (32), ಸ್ಪಿನ್ನರ್‌ ಶಮ್ಸ್‌ ಮುಲಾನಿ ಬೌಲಿಂಗ್‌ನಲ್ಲಿ ‘ಸ್ವೀಪ್‌’ಗೆ ಯತ್ನಿಸಿ ಲೆಗ್‌ಬಿಫೋರ್‌ ಬಲೆಗೆ ಬಿದ್ದರು. ತನುಷ್‌ ಮಾಡಿದ ಮರು ಓವರ್‌ನಲ್ಲಿ ಧ್ರುವ್‌ ಶೋರೆ (128, 50ಎಸೆತ) ನಿರೀಕ್ಷೆಗಿಂತ ಹೆಚ್ಚು ತಿರುಗಿದ ಚೆಂಡಿಗೆ ಬೌಲ್ಡ್ ಆದರು.

ಲಂಚ್‌ ನಂತರ ಅಮನ್‌ ಮೋಖಡೆ (32, 78 ಎಸೆತ) ನಿರ್ಗಮಿಸಿದರು. ವಾಡ್ಕರ್‌ ಇನ್ನೊಂದೆಡೆ ಆಕ್ರಮಣಮಿಶ್ರಿತ ಆಟವಾಡಿ ಆರು ಬೌಂಡರಿಗಳನ್ನು ಬಾರಿಸಿದರು. ಅವರ ಅಜೇಯ 56 ರನ್‌ಗಳು 91 ಎಸೆತಗಳಿಂದ ಬಂದವು. ಐದನೇ ವಿಕೆಟ್‌ಗೆ ನಾಯರ್ ಜೊತೆಗೆ ಅವರು 90 ರನ್ (173 ಎಸೆತ) ಸೇರಿಸಿದರು.

ಸ್ಕೋರುಗಳು: ಮುಂಬೈ: 224 ಮತ್ತು 418; ವಿದರ್ಭ: 105 ಮತ್ತು 92 ಓವರುಗಳಲ್ಲಿ 5 ವಿಕೆಟ್‌ಗೆ 248 (ಅಥರ್ವ ತೈಡೆ 32, ಅಮನ್‌ ಮೋಖಡೆ 32, ಕರುಣ್ ನಾಯರ್ 74, ಅಕ್ಷಯ್‌ ವಾಡ್ಕರ್‌ 56; ತನುಷ್‌ ಕೋಟ್ಯಾನ್ 56ಕ್ಕೆ2, ಮುಷೀರ್ ಖಾನ್ 38ಕ್ಕೆ2)‌

ರಣಜಿ ಟ್ರೋಫಿ ಪಂದ್ಯದ ನಾಲ್ಕನೇ ದಿನವಾದ ಬುಧವಾರ ಅರ್ಧ ಶತಕ ಹೊಡೆದ ಕರುಣ್ ನಾಯರ್ ರಿವರ್ಸ್‌ ಸ್ವೀಪ್‌ ಮಾಡಿದರು. ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.