ADVERTISEMENT

DC vs SRH: ಸನ್‌ರೈಸರ್ಸ್‌ಗೆ ಬಲಿಷ್ಠ ಕ್ಯಾಪಿಟಲ್ಸ್‌ ಸವಾಲು

ಡೆಲ್ಲಿ ಪಾಳೆಯಕ್ಕೆ ಮರಳಿದ ಶ್ರೇಯಸ್ ಅಯ್ಯರ್;

ಪಿಟಿಐ
Published 21 ಸೆಪ್ಟೆಂಬರ್ 2021, 22:15 IST
Last Updated 21 ಸೆಪ್ಟೆಂಬರ್ 2021, 22:15 IST
ಕೇನ್ ವಿಲಿಯಮ್ಸನ್
ಕೇನ್ ವಿಲಿಯಮ್ಸನ್   

ದುಬೈ: ಪ್ಲೇ ಆಫ್ ಪ್ರವೇಶದ್ವಾರದ ಸನಿಹದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಶ್ರೇಯಸ್ ಅಯ್ಯರ್ ಮರಳಿ ಬಂದಿದ್ದಾರೆ. ಇದರಿಂದಾಗಿ ತಂಡದ ಬಲವು ಇಮ್ಮಡಿಸಿದೆ.

ಬುಧವಾರ ನಡೆಯಲಿರುವ ಸನ್‌ರೈಸರ್ಸ್‌ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಜಯದ ವಿಶ್ವಾಸ ದ್ವಿಗುಣಗೊಂಡಿದೆ. ಟೂರ್ನಿಯ ಮೊದಲ ಹಂತದ ಸಂದರ್ಭದಲ್ಲಿ ಗಾಯಗೊಂಡಿದ್ದ ಶ್ರೇಯಸ್‌ ತಂಡದಲ್ಲಿರಲಿಲ್ಲ. ನಾಯಕತ್ವ ವಹಿಸಿಕೊಂಡಿದ್ದ ರಿಷಭ್ ಪಂತ್, ತಂಡವನ್ನು ಪಾಯಿಂಟ್ ಪಟ್ಟಿಯಲ್ಲಿ ಉನ್ನತ ಸ್ಥಾನ ಸಿಗುವಂತೆ ನೋಡಿಕೊಂಡಿದ್ದರು. ಇದೀಗ ತನ್ನ ಖಾತೆಯಲ್ಲಿ 12 ಅಂಕಗಳನ್ನು ಇಟ್ಟುಕೊಂಡಿರುವ ಡೆಲ್ಲಿ ತಂಡಕ್ಕೆ ಪ್ಲೇ ಆಫ್ ಹಂತ ಬಹಳ ಸನಿಹದಲ್ಲಿದೆ. ಎರಡು ಅಥವಾ ಮೂರು ಜಯ ಗಳಿಸಿದರೆ ಅರ್ಹತೆ ಗಿಟ್ಟಿಸುವುದು ಖಚಿತ. ಈಗಾಗಲೇ ಎಂಟು ಪಂದ್ಯಗಳನ್ನು ಆಡಿ ಆರರಲ್ಲಿ ಜಯಿಸಿದೆ.

ಬ್ಯಾಟಿಂಗ್‌ನಲ್ಲಿ ಶಿಖರ್ ಧವನ್, ಪೃಥ್ವಿ ಶಾ, ಅಯ್ಯರ್, ಶಿಮ್ರೊನ್ ಹೆಟ್ಮೆಯರ್ ಉತ್ತಮ ಲಯದಲ್ಲಿದ್ದಾರೆ. ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್, ಅಕ್ಷರ್‌ ಪಟೇಲ್ ಪಂದ್ಯದ ಯಾವುದೇ ಹಂತದಲ್ಲಿಯೂ ತಮ್ಮ ತಂಡದತ್ತ ಜಯವನ್ನು ಎಳೆದು ತರಬಲ್ಲ ಸಮರ್ಥರು. ಕಗಿಸೊ ರಬಾಡ, ಉಮೇಶ್ ಯಾದವ್, ಎನ್ರಿಚ್ ನಾಕಿಯಾ ಅವರ ಸ್ವಿಂಗ್ ಅಸ್ತ್ರಗಳನ್ನು ಎದುರಿಸಲು ಹೈದರಾಬಾದ್ ವಿಶೇಷ ತಂತ್ರಗಾರಿಕೆ ರೂಪಿಸುವುದು ಅನಿವಾರ್ಯ.

ADVERTISEMENT

ಏಕೆಂದರೆ, ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ತಂಡದ ಹಾದಿಸುಗಮವಾಗಿಲ್ಲ. ಆಡಿರುವ ಏಳು ಪಂದ್ಯಗಳಲ್ಲಿ ಗೆದ್ದಿರುವುದು ಒಂದರಲ್ಲಿ ಮಾತ್ರ. ಕೇವಲ ಎರಡು ಪಾಯಿಂಟ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಹಾಗಾಗಿ ಈ ಹಂತದಲ್ಲಿ ಎಲ್ಲ ಆಡಬೇಕಿರುವ ಎಲ್ಲ ಪಂದ್ಯಗಳಲ್ಲೂ ಜಯಿಸುವುದು ಮಹತ್ವದ್ದಾಗಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅವರನ್ನು ಆಡುವ ಹನ್ನೊಂದರಲ್ಲಿ ಆಯ್ಕೆ ಮಾಡಿರಲಿಲ್ಲ. ಈ ಪಂದ್ಯದಲ್ಲಿ ಅವರು ಕಣಕ್ಕಿಳಿಯುವರೇ ಎಂಬ ಕುತೂಹಲವೂ ಗರಿಗೆದರಿದೆ. ಅದೇ ಪಂದ್ಯದಲ್ಲಿ ಕರ್ನಾಟಕದ ಮನೀಷ್ ಪಾಂಡೆ ಇನಿಂಗ್ಸ್ ಆರಂಭಿಸಿದ್ದರು. ಭುವನೇಶ್ವರ್ ಕುಮಾರ್, ಟಿ. ನಟರಾಜನ್ ಅವರು ತಂಡಕ್ಕೆ ಮರಳಿರುವುದು ಬೌಲಿಂಗ್ ವಿಭಾಗಕ್ಕೆ ಬಲ ಬಂದಂತಾಗಿದೆ. ಅಫ್ಗನ್ ಸ್ಪಿನ್ನರ್ ರಶೀದ್ ಖಾನ್ ಸೇರಿದಂತೆ ಸನ್‌ರೈಸರ್ಸ್‌ ಬೌಲರ್‌ಗಳ ಮುಂದೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಮಾರ್ಗದರ್ಶನದಲ್ಲಿ ಪಳಗಿರುವ ಡೆಲ್ಲಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಇದೆ.

ತಂಡಗಳು
ಡೆಲ್ಲಿ ಕ್ಯಾಪಿಟಲ್ಸ್:
ರಿಷಭ್ ಪಂತ್ (ನಾಯಕ), ಅಜಿಂಕ್ಯ ರಹಾನೆ, ಪೃಥ್ವಿ ಶಾ, ಶಿಖರ್ ಧವನ್, ರಿಪಲ್ ಪಟೇಲ್, ಶ್ರೇಯಸ್ ಅಯ್ಯರ್, ಶಿಮ್ರೊನ್ ಹೆಟ್ಮೆಯರ್, ಸ್ಟೀವ್ ಸ್ಮಿತ್, ಅಮಿತ್ ಮಿಶ್ರಾ, ಎನ್ರಿಚ್ ನಾಕಿಯಾ, ಆವೇಶ್ ಖಾನ್, ಬೆನ್ ಡ್ವಾರ್‌ಶಿಸ್, ಇಶಾಂತ್ ಶರ್ಮಾ, ಕಗಿಸೊ ರಬಾಡ, ಕುಲವಂತ್ ಖೆಜ್ರೊಲಿಯಾ, ಲುಕ್ಮನ್ ಮೆರಿವಾಲಾ, ಪ್ರವೀಣ್ ದುಬೆ, ಟಾಮ್ ಕರನ್, ಉಮೇಶ್ ಯಾದವ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಮಾರ್ಕಸ್ ಸ್ಟೊಯಿನಸ್, ಆರ್. ಅಶ್ವಿನ್, ಸ್ಯಾಮ್ ಬಿಲಿಂಗ್ಸ್, ವಿಷ್ಣು ವಿನೋದ್.

ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಡೇವಿಡ್ ವಾರ್ನರ್, ಮನೀಷ್ ಪಾಂಡೆ, ಜೇಸನ್ ರಾಯ್, ಶೆರ್ಫೆನ್ ರುದರ್‌ಫೋರ್ಡ್, ವೃದ್ಧಿಮಾನ್ ಸಹಾ, ಶ್ರೀವತ್ಸ ಗೋಸ್ವಾಮಿ, ರಶೀದ್ ಖಾನ್, ವಿಜಯಶಂಕರ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಖಲೀಲ್ ಅಹಮದ್, ಟಿ. ನಟರಾಜನ್, ಬಾಸಿಲ್ ಥಂಪಿ, ಸಂದೀಪ್ ಶರ್ಮಾ, ಶಹಬಾಜ್ ನದೀಂ, ಅಬ್ದುಲ್ ಸಮದ್, ಜೆ. ಸುಚಿತ್, ಜೇಸನ್ ಹೋಲ್ಡರ್, ವಿರಾಟ್ ಸಿಂಗ್, ಪ್ರಿಯಂ ಗಾರ್ಗ್, ಕೇದಾರ್ ಜಾಧವ್, ಮುಜೀಬ್ ಉರ್ ರೆಹಮಾನ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

--

ಬಲಾಬಲ
ಪಂದ್ಯ; 19
ಸನ್‌ರೈಸರ್ಸ್‌ ಜಯ; 11
ಡೆಲ್ಲಿ ಜಯ; 8

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.