ನವದೆಹಲಿ: ಕ್ರಿಕೆಟಿಗ ಶಿಖರ್ ಧವನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡದಂತೆ ಅಥವಾ ಅವರ ಪ್ರತಿಷ್ಠೆಗೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ನೀಡದಂತೆ ಧವನ್ ಅವರ ವಿಚ್ಛೇದಿತ ಪತ್ನಿ, ಆಸ್ಟ್ರೇಲಿಯಾ ಪ್ರಜೆ ಆಯೆಷಾ ಮುಖರ್ಜಿ ಅವರಿಗೆ ದೆಹಲಿಯ ಪಟಿಯಾಲ ಹೌಸ್‌ನ ಕೌಟುಂಬಿಕ ನ್ಯಾಯಾಲಯ ತಿಳಿಸಿದೆ.
‘ನನ್ನ ವೃತ್ತಿಜೀವನವನ್ನು ಹಾಳುಮಾಡುವುದಾಗಿ ಆಯೆಷಾ ಬೆದರಿಕೆ ಹಾಕುತ್ತಿದ್ದಾರೆ. ಐಪಿಎಲ್ ಫ್ರಾಂಚೈಸ್ ‘ಡೆಲ್ಲಿ ಕ್ಯಾಪಿಟಲ್ಸ್’ ಮಾಲೀಕ ಧೀರಜ್ ಮಲ್ಹೋತ್ರಾ ಅವರಿಗೆ ನನ್ನ ವಿರುದ್ಧ ಸಂದೇಶಗಳನ್ನು ಕಳುಹಿಸಿದ್ದಾರೆ. ನನ್ನ ಖ್ಯಾತಿಗೆ ಧಕ್ಕೆ ತರಲೆಂದೇ ಹೀಗೆ ಮಾಡಿದ್ದಾರೆ’ ಎಂದು ಆರೋಪಿಸಿ ಆಯೆಷಾ ಮುಖರ್ಜಿಯ ವಿರುದ್ಧ ಧವನ್ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
‘ಧವನ್ ವಿರುದ್ಧ ಆಯೆಷಾ ಅವರಿಗೆ ನಿಜವಾಗಿಯೂ ದೂರುಗಳಿದ್ದರೆ ಅವುಗಳನ್ನು ಸಂಬಂಧಪಟ್ಟ ಪ್ರಾಧಿಕಾರದಲ್ಲಿ ದಾಖಲಿಸುವುದನ್ನು ತಡೆಯಲು ಕೋರ್ಟ್‌ಗೆ ಸಾಧ್ಯವಿಲ್ಲ’ ಎಂದು ನ್ಯಾಯಾಧೀಶ ಹರೀಶ್ ಕುಮಾರ್ ಹೇಳಿದರು.
ಆದರೆ, ‘ಧವನ್ ವಿರುದ್ಧದ ತನ್ನ ಆರೋಪಗಳನ್ನು ಸ್ನೇಹಿತರು, ಸಂಬಂಧಿಕರೊಂದಿಗೆ ಹೇಳಿಕೊಳ್ಳುವುದು, ಸೂಕ್ತ ಅಧಿಕಾರಿಯನ್ನು ಸಂಪರ್ಕಿಸುವ ಮೊದಲೇ ಅದನ್ನು ಬಹಿರಂಗವಾಗಿ ಹೇಳುವುದರಿಂದ ಅವರನ್ನು ಖಂಡಿತವಾಗಿಯೂ ನಿರ್ಬಂಧಿಸಬಹುದು’ ಎಂದು ನ್ಯಾಯಧೀಶರು ಹೇಳಿದರು.
‘ಧವನ್ ವಿರುದ್ಧದ ಯಾವುದೇ ಆರೋಪ, ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ, ಮುದ್ರಣ ಮಾಧ್ಯಮ, ಸ್ನೇಹಿತರು, ಸಂಬಂಧಿಗಳು ಅಥವಾ ಇತರ ಯಾವುದೇ ವೇದಿಕೆಗಳಲ್ಲಿ ಮಾನಹಾನಿಕರ ಮತ್ತು ಸುಳ್ಳು ವಿಷಯವನ್ನು ಪ್ರಸಾರ ಮಾಡದಂತೆ ಮುಂದಿನ ಆದೇಶದವರೆಗೆ ಆಯೆಷಾ ಅವರನ್ನು ನಿರ್ಬಂಧಿಸಲಾಗಿದೆ’ ಎಂದು ನ್ಯಾಯಾಧೀಶರು ಆದೇಶ ಹೊರಡಿಸಿದರು.
ಧವನ್ ಮತ್ತು ಆಯೆಷಾ ಅವರು 2021ರ ಸೆಪ‍್ಟೆಂಬರ್‌ನಲ್ಲಿ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ವಿಚಾರವನ್ನು ಆಯಿಷಾ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದರು. ಅದರೊಂದಿಗೆ ಅವರ 8 ವರ್ಷಗಳ ದಾಂಪತ್ಯ ಅಂತ್ಯವಾಗಿತ್ತು. ಇಬ್ಬರಿಗೂ ಒಬ್ಬ ಮಗನಿದ್ದಾನೆ. ಆತ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಆಯೆಷಾ ಅವರ ಜೊತೆಗಿದ್ದಾನೆ.
ಆಯಿಷಾ ಅವರು ಶಿಖರ್ ಧವನ್ ಅವರನ್ನು ಎರಡನೇ ಮದುವೆಯಾಗಿದ್ದರು. ಶಿಖರ್ ಧವನ್ ಅವರಿಗಿಂತ ಮೊದಲು ಆಯಿಷಾ ಆಸ್ಟ್ರೇಲಿಯಾ ಮೂಲದ ಉದ್ಯಮಿಯನ್ನು ಮದುವೆಯಾಗಿದ್ದರು. ಅವರಿಂದ ಆಯಿಷಾ ಇಬ್ಬರು ಹೆಣ್ಣು ಮಕ್ಕಳನ್ನು ಪಡೆದಿದ್ದಾರೆ.
ಇದನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.