ಪುದುಚೇರಿ (ಪಿಟಿಐ): ಮತ್ತೊಮ್ಮೆ ತನ್ನ ಆಲ್‌ರೌಂಡ್ ‘ಪರಾಕ್ರಮ’ ಮೆರೆದ ದಕ್ಷಿಣ ವಲಯ ತಂಡ, ದೇವಧರ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಈಶಾನ್ಯ ವಲಯ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಈಶಾನ್ಯ ವಲಯವನ್ನು ದಕ್ಷಿಣ ವಲಯ ಬೌಲರ್‌ಗಳು 136 ರನ್‌ಗಳಿಗೆ ಕಟ್ಟಿಹಾಕಿದರು. ಅದ್ಭುತ ಲಯವನ್ನು ಮುಂದುವರಿಸಿದ ಕರ್ನಾಟಕದ ವೇಗಿ ವಿದ್ವತ್ ಕಾವೇರಪ್ಪ (27ಕ್ಕೆ 3) ಮತ್ತು ತಮಿಳುನಾಡಿನ ಸಾಯಿ ಕಿಶೋರ್ (22ಕ್ಕೆ 3) ಅವರು ಈಶಾನ್ಯ ವಲಯದ ಪತನಕ್ಕೆ ಕಾರಣರಾದರು.
ದಕ್ಷಿಣ ವಲಯ ತಂಡ ಸುಲಭ ಗುರಿಯನ್ನು 19.3 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗಳಿಸಿತು. ರೋಹನ್ ಕುನ್ನುಮ್ಮಲ್ (ಔಟಾಗದೆ 87 ರನ್, 58 ಎ., 8X4, 5X6) ಅಬ್ಬರದ ಅರ್ಧಶತಕದ ಮೂಲಕ ಗಮನ ಸೆಳೆದರು. ರೋಹನ್ ಮತ್ತು ಮಯಂಕ್ ಅಗರವಾಲ್ (32 ರನ್, 46 ಎ.) ಮೊದಲ ವಿಕೆಟ್‌ಗೆ 95 ರನ್ ಸೇರಿಸಿದರು. ಮಯಂಕ್ ಔಟಾದ ಬಳಿಕ ಬಂದ ನಾರಾಯಣ ಜಗದೀಶನ್ (ಔಟಾಗದೆ 15) ಅವರೊಂದಿಗೆ ಸೇರಿ, ರೋಹನ್ ತಂಡವನ್ನು ಜಯದತ್ತ ಮುನ್ನಡೆಸಿದರು.
ಈ ಗೆಲುವಿನ ಮೂಲಕ ದಕ್ಷಿಣ ವಲಯ ತಂಡ 12 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿತು.
ಈ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ವಾಸುಕಿ ಕೌಶಿಕ್ ಬದಲು ಅರ್ಜುನ್ ತೆಂಡೂಲ್ಕರ್ ಅವರನ್ನು ಕಣಕ್ಕಿಳಿಸಿತು. ಎಡಗೈ ವೇಗಿ ಅರ್ಜುನ್, ಆರಂಭಿಕ ಬ್ಯಾಟರ್ ಅನುಪ್ ಅಹ್ಲಾವತ್ (2) ಅವರ ವಿಕೆಟ್ ಪಡೆದರು. ಅದಕ್ಕೂ ಮುನ್ನ ವಿದ್ವತ್, ಇನ್ನೊಬ್ಬ ಆರಂಭಿಕ ಬ್ಯಾಟರ್ ನೀಲೇಶ್ ಲಮಿಚಾನೆ (9) ಅವರನ್ನು ಪೆವಿಲಿಯನ್‌ಗಟ್ಟಿದ್ದರು. ಆರಂಭದಲ್ಲೇ ಆಘಾತ ಅನುಭವಿಸಿದ ತಂಡಕ್ಕೆ ಚೇತರಿಸಿಕೊಳ್ಳಲು ಎದುರಾಳಿ ಬೌಲರ್‌ಗಳು ಅವಕಾಶವನ್ನೇ ನೀಡಲಿಲ್ಲ.
ವಿದ್ವತ್ ಅವರು ಮೂರು ಪಂದ್ಯಗಳಿಂದ 12 ವಿಕೆಟ್‌ಗಳ ಮೂಲಕ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಾಯಿ ಕಿಶೋರ್ 10 ವಿಕೆಟ್ ಪಡೆದಿದ್ದಾರೆ.
ಪೂರ್ವ ವಲಯಕ್ಕೆ ಜಯ: ದಿನದ ಮತ್ತೊಂದು ಪಂದ್ಯದಲ್ಲಿ ರಿಯಾನ್ ಪರಾಗ್ (131 ರನ್ ಹಾಗೂ 57ಕ್ಕೆ 4) ಅವರ ಆಲ್‌ರೌಂಡ್ ಆಟದ ನೆರವಿನಿಂದ ಪೂರ್ವ ವಲಯ ತಂಡ 88 ರನ್‌ಗಳಿಂದ ಉತ್ತರ ವಲಯ ತಂಡವನ್ನು ಮಣಿಸಿತು.
ಸಂಕ್ಷಿಪ್ತ ಸ್ಕೋರ್: ಈಶಾನ್ಯ ವಲಯ 49.2 ಓವರ್‌ಗಳಲ್ಲಿ 136 (ಕಂಗಬಮ್ ಪ್ರಿಯೊಜಿತ್ 40, ವಿದ್ವತ್ ಕಾವೇರಪ್ಪ 27ಕ್ಕೆ 3, ಸಾಯಿ ಕಿಶೋರ್ 22ಕ್ಕೆ 3, ಅರ್ಜುನ್ ತೆಂಡೂಲ್ಕರ್ 21ಕ್ಕೆ 1, ವೈಶಾಖ್ ವಿಜಯಕುಮಾರ್ 29ಕ್ಕೆ 1) ದಕ್ಷಿಣ ವಲಯ 19.3 ಓವರ್‌ಗಳಲ್ಲಿ 1 ವಿಕೆಟ್‌ಗೆ 137 (ರೋಹನ್ ಕುನ್ನುಮ್ಮಲ್ ಔಟಾಗದೆ 87, ಮಯಂಕ್ ಅಗರವಾಲ್ 32, ನಾರಾಯಣ ಜಗದೀಶನ್ ಔಟಾಗದೆ 15) ಫಲಿತಾಂಶ: ದಕ್ಷಿಣ ವಲಯಕ್ಕೆ 9 ವಿಕೆಟ್ ಜಯ
ಪೂರ್ವ ವಲಯ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 337 (ರಿಯಾನ್ ಪರಾಗ್ 131, ಕುಮಾರ್ ಕುಶಾಗ್ರ 98, ಮಯಂಕ್ ಯಾದವ್ 63ಕ್ಕೆ 4, ಹರ್ಷಿತ್ ರಾಣಾ 54ಕ್ಕೆ 3) ಉತ್ತರ ವಲಯ: 45.3 ಓವರ್‌ಗಳಲ್ಲಿ 249 (ಅಭಿಷೇಕ್ ಶರ್ಮಾ 44, ಹಿಮಾಂಶು ರಾಣಾ 40, ಮನ್‌ದೀಪ್ ಸಿಂಗ್ 50, ಶುಭಂ ರೋಹಿಲ 41, ರಿಯಾನ್ ಪರಾಗ್ 57ಕ್ಕೆ 4, ಶಹಬಾಜ್ ಅಹಮದ್ 41ಕ್ಕೆ 3) ಫಲಿತಾಂಶ: ಪೂರ್ವ ವಲಯಕ್ಕೆ 88 ರನ್ ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.