ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಂದ್ಯ ನಡೆದಾಗ ಒಟ್ಟು 549 ರನ್‌ಗಳು ದಾಖಲಾದವು. 38 ಸಿಕ್ಸರ್‌ಗಳು ಸಿಡಿದವು. ಕೇವಲ 40 ಓವರ್‌ಗಳಲ್ಲಿ ದಾಖಲಾದ ಈ ರನ್‌ಪ್ರವಾಹದಲ್ಲಿ ಬೌಲರ್‌ಗಳು ಅಕ್ಷರಶಃ ಕೊಚ್ಚಿಹೋದರು.
ಈ ಬಾರಿಯ ಐಪಿಎಲ್‌ನಲ್ಲಿ ಬ್ಯಾಟರ್‌ಗಳ ಪರಾಕ್ರಮಕ್ಕೆ ಇಂತಹ ಉದಾಹರಣೆಗಳು ಬಹಳಷ್ಟಿವೆ.. ಭಾರತದ ಮತ್ತು ವಿದೇಶಿ ಬ್ಯಾಟರ್‌ಗಳೆಲ್ಲರೂ ಈ ಬಾರಿ ತಮ್ಮ ತೋಳ್ಬಲ ಮೆರೆಯುತ್ತಿದ್ದಾರೆ. ಯಾವುದೇ ತಂಡವೂ 200ರ ಮೊತ್ತ ಗಳಿಸುವುದು ಸಹಜವೆಂಬಂತೆ ಕಾಣುತ್ತಿದೆ. ಇದಕ್ಕೆ ಇಂಪ್ಯಾಕ್ಟ್ ಪ್ಲೇಯರ್, ಬೌಂಡರಿಗಳ ಸುತ್ತಳತೆ ಕಡಿಮೆಯಾಗಿರುವುದು ಮುಂತಾದ ಕಾರಣಗಳನ್ನು ಹೇಳಲಾಗುತ್ತಿದೆ.
‘ಈ ತರಹದ ಕ್ರಿಕೆಟ್‌ಗೆ ಬೌಲರ್‌ಗಳ ಅಗತ್ಯವಿಲ್ಲ. ಬೌಲಿಂಗ್ ಯಂತ್ರ ಇಟ್ಟುಬಿಡುವುದು ಒಳಿತು’ ಎಂಬ ವ್ಯಂಗ್ಯದ ಮೀಮ್‌ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಬೌಲರ್‌ಗಳನ್ನು ರಕ್ಷಿಸಿ’ ಎಂದು ಆಫ್‌ಸ್ಪಿನ್ನರ್ ಆರ್.ಅಶ್ವಿನ್ ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದರು.
ಆದರೆ, ಟೂರ್ನಿಯಲ್ಲಿ ಇಲ್ಲಿಯವರೆಗೆ ಬೌಲರ್‌ಗಳ ಆಟವನ್ನು ಅವಲೋಕಿಸುತ್ತ ಹೋದರೆ, ರನ್‌ಗಳನ್ನು ಯಥೇಚ್ಛವಾಗಿ ಕೊಟ್ಟಿರುವುದು ನಿಜ. ಆದರೆ ಅದರಲ್ಲೂ ಮತ್ತಷ್ಟು ಹೊಸದನ್ನು ಕಲಿಯುವತ್ತ ಬೌಲರ್‌ಗಳು ಮುಂದಾಗಿರುವುದು ಕಾಣುತ್ತದೆ. ಪ್ರವಾಹದ ವಿರುದ್ಧ ಈಜುವುದನ್ನು ರೂಢಿಸಿಕೊಳ್ಳುವ ಜಲಚರಗಳಂತೆ ಹಲವು ಬೌಲರ್‌ಗಳು ಈ ರನ್‌ಗಳ ಪ್ರವಾಹದಲ್ಲಿ ತಮ್ಮ ದಿಟ್ಟತನ ಮೆರೆಯುತ್ತಿದ್ದಾರೆ. ವಿಕೆಟ್‌ಗಳನ್ನು ಗಳಿಸುವುದರ ಜೊತೆಗೆ ಡಾಟ್‌ಬಾಲ್ ಪ್ರಯೋಗದಲ್ಲಿಯೂ ಹಿಂದೆ ಬಿದ್ದಿಲ್ಲ.
ಚುಟುಕು ಕ್ರಿಕೆಟ್ ಮಾದರಿಯಲ್ಲಿ ವಿಕೆಟ್ ಪಡೆಯುವ ಎಸೆತಕ್ಕಿರುವಷ್ಟೇ ಕಿಮ್ಮತ್ತು ರನ್ ಬಿಟ್ಟುಕೊಡದ ಡಾಟ್‌ಬಾಲ್‌ಗೂ ಇರುತ್ತದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಏಕೆಂದರೆ ಒಂದು ಓವರ್‌ನಲ್ಲಿ 30–36 ರನ್ ಬೇಕಾದರೂ ಹೊಡೆಯಬಲ್ಲ ಬ್ಯಾಟರ್‌ಗಳು ಇದ್ದಾರೆ. ಅಂತಹ ಫಲಿತಾಂಶಗಳು ಈಗಾಗಲೇ ಹೊರಹೊಮ್ಮಿವೆ. ಈ ಮಾದರಿಯಲ್ಲಿ ಸಿಕ್ಸರ್, ಬೌಂಡರಿಗಳು ಬೌಲರ್ ಮೇಲೆ ಒತ್ತಡ ಹೇರಿದರೆ ರನ್ ಗಳಿಕೆಯಾಗದ ಎಸೆತಗಳು ಬ್ಯಾಟಿಂಗ್ ಮಾಡುವ ತಂಡದ ಒತ್ತಡ ಹೆಚ್ಚಿಸುತ್ತವೆ. ಇಂತಹ ಸಂಗತಿಗಳಿಂದಾಗಿಯೇ ಕ್ರಿಕೆಟ್ ರೋಚಕವಾಗುತ್ತ ಹೋಗುತ್ತದೆ.
ಅಂತಹ ರೋಚಕ ಅಂಶಗಳು ಈ ಬಾರಿಯೂ ಇವೆ. ಈ ಆವೃತ್ತಿಯಲ್ಲಿ ಕಳೆದ 60 ಪಂದ್ಯಗಳಲ್ಲಿ 21 ಸಾವಿರಕ್ಕೂ ಹೆಚ್ಚು ರನ್‌ಗಳು ಹರಿದಿವೆ. ಸಾವಿರಕ್ಕೂ ಹೆಚ್ಚು ಸಿಕ್ಸರ್‌ಗಳು ಸಿಡಿದಿವೆ. ಅದರ ನಡುವೆಯೂ ನಾಲ್ಕು ಸಾವಿರಕ್ಕೂ ಹೆಚ್ಚು ಡಾಟ್‌ಬಾಲ್‌ಗಳು ದಾಖಲಾಗಿವೆ. ಈ ಹಾದಿಯಲ್ಲಿ ಬೌಲರ್‌ಗಳು ತಮ್ಮ ‘ಅಸ್ತಿತ್ವ’ಕ್ಕಾಗಿ ಹೊಸ ತಂತ್ರಗಳನ್ನು ಕಲಿತಿದ್ದಾರೆ.
ಈ ಹಿಂದಿನ ಆವೃತ್ತಿಗಳಲ್ಲಿ ಡಾಟ್‌ಬಾಲ್ ಪ್ರಯೋಗದಲ್ಲಿ ಸ್ಪಿನ್ನರ್‌ಗಳೇ ಮುಂಚೂಣಿಯಲ್ಲಿದ್ದರು. ಹರಭಜನ್ ಸಿಂಗ್, ಪೀಯೂಷ್ ಚಾವ್ಲಾ, ಅಮಿತ್ ಮಿಶ್ರಾ, ಆರ್.ಅಶ್ವಿನ್ ಹಾಗೂ ಅಫ್ಗಾನಿಸ್ತಾನದ ರಶೀದ್ ಖಾನ್ ಅವರಿಗೆ ಇದು ಕರಗತವಾಗಿತ್ತು. ಆದರೆ ಈ ಸಲದ ಟೂರ್ನಿಯಲ್ಲಿ ವೇಗಿಗಳು ಪಾರಮ್ಯ ಮೆರೆಯುತ್ತಿದ್ದಾರೆ. 17ನೇ ಆವೃತ್ತಿಯಲ್ಲಿ ಹೆಚ್ಚು ಡಾಟ್‌ಬಾಲ್ ಹಾಕಿದವರ ಪಟ್ಟಿಯ ಅಗ್ರ ಐದು ಬೌಲರ್‌ಗಳಲ್ಲಿ ಸುನಿಲ್ ನಾರಾಯಣ ಮತ್ತು ವರುಣ ಚಕ್ರವರ್ತಿ ಇಬ್ಬರೇ ಸ್ಪಿನ್ನರ್‌ಗಳು. ಉಳಿದ ಮೂವರು ವೇಗಿಗಳು.
ಈ ಮೊದಲು ಮೂರು ಸ್ಟಂಪ್‌ಗಳನ್ನು ಗುರಿಯಾಗಿಟ್ಟುಕೊಂಡು ಸ್ವಿಂಗ್, ಸ್ಪಿನ್ ಎಸೆತಗಳನ್ನು ಹಾಕುತ್ತಿದ್ದರು. ಆದರೆ ಈಗ ಆಫ್‌ಸ್ಟಂಪ್‌ನಿಂದ ದೂರ ಹಾಗೂ ವೈಡ್ ಗೆರೆಯ ಕೆಲವೇ ಮಿಲಿಮೀಟರ್‌ಗಳ ಸಮೀಪದೊಳಗೆ ಎಸೆತಗಳನ್ನು ಹಾಕುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಔಟ್‌ಸ್ವಿಂಗ್, ಇನ್‌ಸ್ವಿಂಗ್, ಕಟರ್, ಯಾರ್ಕರ್, ಬೌನ್ಸರ್‌ಗಳ ಜೊತೆಗೆ ನಕಲ್ ಬಾಲ್‌ಗಳ (ನಿಧಾನಗತಿ ಎಸೆತಗಳು) ಪ್ರಯೋಗಕ್ಕೂ ಒತ್ತು ಸಿಕ್ಕಿದೆ. ತಂತ್ರಕ್ಕೆ ಪ್ರತಿತಂತ್ರ ಎಂಬಂತೆ ಬ್ಯಾಟರ್‌ಗಳು ಬಲಾಢ್ಯರಾದಷ್ಟೂ ಬೌಲರ್‌ಗಳೂ ಹೊಸ ಕೌಶಲಗಳನ್ನು ರೂಢಿಸಿಕೊಳ್ಳುವುದು ಅನಿವಾರ್ಯವಾಗುತ್ತಿದೆ.
ಫೀಲ್ಡಿಂಗ್ ಮತ್ತು ವಿಕೆಟ್ ಕೀಪಿಂಗ್ ತಂತ್ರಗಾರಿಕೆಯೂ ಬದಲಾಗುತ್ತಿರುವುದು ಗಮನಾರ್ಹ. ಬೌಂಡರಿ ಲೈನ್‌ನಲ್ಲಿ ಫೀಲ್ಡರ್‌ಗಳು ಪಡೆಯುತ್ತಿರುವ ಕ್ಯಾಚ್‌ಗಳು ಸಿನಿಮಾಗಳ ಸಾಹಸದೃಶ್ಯಗಳಷ್ಟೇ ರೋಚಕತೆ ಮೂಡಿಸುತ್ತಿವೆ. ಕೀಪರ್‌ಗಳು ವೈಡ್ ಆ್ಯಂಗಲ್ ಎಸೆತಗಳಿಗೆ ಮೈಯೆಲ್ಲಾ ಕಣ್ಣಾಗಿ ಇರಬೇಕಾಗಿರುವುದು ಸುಲಭದ ಕೆಲಸವಂತೂ ಅಲ್ಲ.
ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲ ಮಾಡಿಕೊಡುವುದರ ಕುರಿತು ಏನೇ ಟೀಕೆಗಳಿದ್ದರೂ ಕಳೆದ 17 ವರ್ಷಗಳಿಂದ ಐಪಿಎಲ್‌ನಲ್ಲಿ ಬೌಲರ್‌ಗಳು ಕಲಿತದ್ದು ಬಹಳಷ್ಟಿದೆ. ಅದರಿಂದಾಗಿಯೇ ವರ್ಷದಿಂದ ವರ್ಷಕ್ಕೆ ಬೌಲರ್‌ಗಳ ಮೌಲ್ಯವೂ ಹೆಚ್ಚುತ್ತಿದೆ. ಈ ವರ್ಷದ ಹರಾಜಿನಲ್ಲಿ ಅತಿ ಹೆಚ್ಚು ಮೌಲ್ಯ ಗಿಟ್ಟಿಸಿದ್ದು ಕೂಡ ಬೌಲರ್‌ಗಳೇ. ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಅವರೇ ಈ ಮಾತಿಗೆ ಉದಾಹರಣೆ.
‘ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ದರ್ಬಾರು ನಡೆಸಬಹುದು. ಆದರೆ ಬೌಲರ್ ಮೊದಲ ಎಸೆತ ಹಾಕದೇ ಪಂದ್ಯ ಆರಂಭವಾಗುವುದಿಲ್ಲ’ ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ದಿಗ್ಗಜ ಆಟಗಾರ ಯರ್‍ರಪಳ್ಳಿ ಪ್ರಸನ್ನ ಹೇಳಿದ್ದರು.
ಮಾದರಿ ಯಾವುದೇ ಇರಲಿ. ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಪೈಪೋಟಿ ನಡೆದರಷ್ಟೇ ಆಟ ಬೆಳೆಯುವುದು.
35 ಇನಿಂಗ್ಸ್‌ಗಳಲ್ಲಿ ದ್ವಿಶತಕ
ಈ ಬಾರಿಯ ಟೂರ್ನಿಯಲ್ಲಿ ಈಗ 60 ಪಂದ್ಯಗಳು ಮುಗಿದಿವೆ. ಆ ಪೈಕಿ 35 ಇನಿಂಗ್ಸ್‌ಗಳಲ್ಲಿ 200ಕ್ಕಿಂತ ಹೆಚ್ಚಿನ ಮೊತ್ತಗಳು ದಾಖಲಾಗಿವೆ. ಹೋದ ವರ್ಷದ ಟೂರ್ನಿಯಲ್ಲಿ ಒಟ್ಟು 37 ಬಾರಿ ಇನ್ನೂರಕ್ಕೂ ಹೆಚ್ಚಿನ ಮೊತ್ತಗಳು ದಾಖಲಾಗಿದ್ದವು. ಈ ದಾಖಲೆಯನ್ನು ಈ ಬಾರಿಯ ಆವೃತ್ತಿಯು ಮೀರುವ ಸಾಧ್ಯತೆ ಇದೆ.
ಐಪಿಎಲ್‌ನಲ್ಲಿ 240, 250 ರನ್‌ಗಳ ಮೊತ್ತಗಳು ಪದೇ ಪದೇ ದಾಖಲಾಗುತ್ತಿವೆ. ಬ್ಯಾಟಿಂಗ್ ಸ್ನೇಹಿ ಪಿಚ್‌ಗಳು ಹಾಗೂ ಭಾರತದಲ್ಲಿರುವ ಸಣ್ಣ ಸುತ್ತಳತೆಯ ಮೈದಾನಗಳು ಇದಕ್ಕೆ ಪ್ರಮುಖ ಕಾರಣ. ಸರಾಸರಿ ಪ್ರತಿ ಓವರ್‌ಗೆ ಒಂದು ಸಿಕ್ಸರ್ ದಾಖಲಾದ ಪಂದ್ಯಗಳೂ ಇವೆ. ಇದು ಈ ಮಾದರಿಯು ಬೆಳೆಯುತ್ತಿರುವ ಪರಿಯಾಗಿದೆ. ಅದಕ್ಕೆ ತಕ್ಕನಾಗಿ ಆಟಗಾರರೂ ತಮ್ಮ ಕೌಶಲಗಳನ್ನು ರೂಪಿಸಿಕೊಳ್ಳುತ್ತಿದ್ದಾರೆಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬೇಕಾಗಿಲ್ಲ. ನಮ್ಮಲ್ಲಿ ಮೊದಲೇ ಫ್ಲ್ಯಾಟ್ ಪಿಚ್‌ಗಳು ಇವೆ. ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲವಿದೆ. ಇದರಿಂದ ಬೌಲರ್‌ಗಳಿಗೆ ಹೆಚ್ಚು ಯಶಸ್ಸು ಲಭಿಸುತ್ತಿಲ್ಲಮೊಹಮ್ಮದ್ ಸಿರಾಜ್ ಆರ್‌ಸಿಬಿ ಬೌಲರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.