ADVERTISEMENT

Devdutt Padikkal | ಸವಾಲುಗಳ ಸುಳಿಯಿಂದ ಎದ್ದುಬಂದ ದೇವದತ್ತ

ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಪ್ರಥಮ ಎಡಗೈ ಬ್ಯಾಟರ್

ಗಿರೀಶ ದೊಡ್ಡಮನಿ
Published 14 ಫೆಬ್ರುವರಿ 2024, 0:30 IST
Last Updated 14 ಫೆಬ್ರುವರಿ 2024, 0:30 IST
<div class="paragraphs"><p>ದೇವದತ್ತ ಪಡಿಕ್ಕಲ್‌</p></div>

ದೇವದತ್ತ ಪಡಿಕ್ಕಲ್‌

   

ಬೆಂಗಳೂರು: ಭಾರತ ಕ್ರಿಕೆಟ್ ತಂಡಕ್ಕೆ ಹಲವು ಶ್ರೇಷ್ಠ  ಆಟಗಾರರನ್ನು ನೀಡಿದ ಹೆಗ್ಗಳಿಕೆ ಕರ್ನಾಟಕದ್ದು. ಆದರೆ ಇದುವರೆಗೂ ರಾಜ್ಯದಿಂದ ಪರಿಣತ ಎಡಗೈ ಬ್ಯಾಟರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಆ ಕೊರತೆಯನ್ನು ದೇವದತ್ತ ಪಡಿಕ್ಕಲ್‌ ನಿವಾರಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ ಸರಣಿಯ ಮೂರು ಪಂದ್ಯಗಳಿಗೆ ಅವರು ಆಯ್ಕೆಯಾಗಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್ ಗಾಯಗೊಂಡಿರುವುದರಿಂದ 23 ವರ್ಷದ ಪಡಿಕ್ಕಲ್‌ಗೆ ಅವಕಾಶ ಒದಗಿ ಬಂದಿದೆ.  ಆದರೆ ದೇವದತ್ತಗೆ ಈ ಅವಕಾಶ ಸುಲಭವಾಗಿ ಸಿಕ್ಕಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಕಾಡಿದ  ಅನಾರೋಗ್ಯದ ಸಮಸ್ಯೆಗಳನ್ನು ಮೀರಿ ನಿಂತಿದ್ದಾರೆ. 

ADVERTISEMENT

‘ದೇವದತ್ತ ಕಳೆದ 12 ವರ್ಷಗಳಿಂದ ನನ್ನ ಬಳಿ ತರಬೇತಿ ಪಡೆಯುತ್ತಿದ್ದಾರೆ. ಕಠಿಣ ಪರಿಶ್ರಮ, ನಿರಂತರ ಏಕಾಗ್ರತೆ ಮತ್ತು  ಛಲ ಬಿಡದ ಪ್ರಯತ್ನಗಳಿಗೆ ಯಾವತ್ತೂ ಉತ್ತಮ ಫಲ ದೊರೆಯುತ್ತದೆ ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ. ಆರೋಗ್ಯ ಕೈಕೊಟ್ಟಾಗಲೂ ಎದೆಗುಂದಲಿಲ್ಲ. ಭಾರತ ತಂಡದಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ಗುರಿಯನ್ನು ಬಿಟ್ಟುಕೊಡಲಿಲ್ಲ. ಅದಕ್ಕಾಗಿಯೇ ಅವರಿಗೆ ಈ ಅವಕಾಶ ಒದಗಿಬಂದಿದೆ. ಹಾಗೆ ನೋಡಿದರೆ ಎರಡು, ಮೂರು ವರ್ಷಗಳ ಹಿಂದೆಯೇ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಿತ್ತು. ಆದರೆ ಕಾಡಿದ ಅನಾರೋಗ್ಯದಿಂದಾಗಿ ಇಲ್ಲಿಯವರೆಗೆ ಕಾಯಬೇಕಾಯಿತು. ಈಗ ಎಲ್ಲವೂ ಇದೆ. ಭವಿಷ್ಯದಲ್ಲಿ ದೊಡ್ಡ ಆಟಗಾರನಾಗುವ ಸಾಮರ್ಥ್ಯ ಈ ಹುಡುಗನಿಗೆ  ಇದೆ’ ಎಂದು ದೇವದತ್ತ ಅವರ ಬಾಲ್ಯದ ಕೋಚ್,  ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್‌ (ಕೆಐಒಸಿ) ಸಂಸ್ಥೆಯ ಇರ್ಫಾನ್ ಸೇಟ್  ಸಂತಸ ವ್ಯಕ್ತಪಡಿಸಿದರು.

‘2020ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೇವದತ್ತ ಆಯ್ಕೆಯಾಗಿದ್ದರು. ಆದರೆ ಆಗ ಅವರಿಗೆ ಕೋವಿಡ್ ಆಗಿತ್ತು. ಆದ್ದರಿಂದ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಚೇತರಿಸಿಕೊಂಡ ಅವರು ನಂತರದ ಪಂದ್ಯಗಳಲ್ಲಿ ಆಡಿದ್ದರು. ಆ ಟೂರ್ನಿಯಲ್ಲಿ 473 ರನ್‌ಗಳನ್ನು ಕಲೆಹಾಕಿ  ಉದಯೋನ್ಮುಖ ಆಟಗಾರ ಪ್ರಶಸ್ತಿ ಗಳಿಸಿದ್ದರು. 2020–21ರ ವಿಜಯ್ ಹಜಾರೆ ಟ್ರೋಫಿ (ಏಕದಿನ) ಕ್ರಿಕೆಟ್ ಟೂರ್ನಿಯಲ್ಲಿಯೂ ನಾಲ್ಕು ಶತಕ ಗಳಿಸಿದ್ದರು. ಲಿಸ್ಟ್ ಎ ಪಂದ್ಯದಲ್ಲಿ  ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಆಗಿದ್ದರು. 2021ರ ಐಪಿಎಲ್‌ನಲ್ಲಿಯೂ ಅವರು 400ಕ್ಕೂ ಹೆಚ್ಚು ರನ್ ಗಳಿಸಿದ್ದರು.  ಅದೇ ವರ್ಷ ಶ್ರೀಲಂಕಾ ಎದುರಿನ ಟಿ20 ಸರಣಿಯಲ್ಲಿ ಆಡಲು ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದರು’ ಎಂದು ಇರ್ಫಾನ್ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಆದರೆ ಅದೇ ವರ್ಷ ದೇವದತ್ತ ಆರೋಗ್ಯ ಕೈಕೊಟ್ಟಿತು. ಪಚನಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಕಾಡಿತು. ದೇಹದ ತೂಕ ಇಳಿದುಹೋಯಿತು. ಚೇತರಿಸಿಕೊಳ್ಳಲು ದೀರ್ಘ ಕಾಲ ಹಿಡಿಯಿತು. ಸುಮಾರು ಒಂದೂವರೆ ವರ್ಷ ಅವರು ಕ್ರಿಕೆಟ್‌ ಮರಳಲು ಶ್ರಮಪಡಬೇಕಾಯಿತು. ಒಂದು ಐಪಿಎಲ್‌ ಆವೃತ್ತಿಯಿಂದಲೂ ಹೊರಗುಳಿದರು. ಆದರೆ ಮರಳಿದ ನಂತರ ಅವರು ಬೇಗನೆ ಲಯಕ್ಕೆ ಮರಳಿದ್ದು ವಿಶೇಷ.

ಪ್ರಸಕ್ತ ರಣಜಿ ಋತುವಿನಲ್ಲಿಯೂ ಅವರ ಅಮೋಘ ಆಟ ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ವಹಿಸಿದೆ. ಈ ಋತುವಿನಲ್ಲಿ ಅವರು ನಾಲ್ಕು ಪಂದ್ಯ ಆಡಿದ್ದಾರೆ. ಮೂರು ಶತಕ ಹೊಡೆದಿದ್ದಾರೆ. ಟೂರ್ನಿಯ ಮಧ್ಯದಲ್ಲಿಯೇ ಅವರಿಗೆ ಭಾರತ ಎ ತಂಡಕ್ಕೆ ಬುಲಾವ್ ಬಂದಿತ್ತು. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯಗಳಲ್ಲಿಯೂ ಅವರು ಮಿಂಚಿದ್ದರು. ಅಲ್ಲಿಯೂ ಒಂದು ಶತಕ ಹೊಡೆದಿದ್ದರು. ಇದರಿಂದಾಗಿ ಅಜಿತ್ ಆಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು.

ಮೂರು ಮಾದರಿಯಲ್ಲಿಯೂ ರನ್‌ಗಳನ್ನು ಹರಿಸಬಲ್ಲ ಆಟಗಾರ ಎಂಬುದನ್ನು ದೇಶಿ ಮತ್ತು ಐಪಿಎಲ್‌ನಲ್ಲಿ ಸಾಬೀತುಪಡಿಸಿರುವ ದೇವದತ್ತ, ಪ್ರತಿದಿನ ನೆಟ್ಸ್‌ನಲ್ಲಿ 400ಕ್ಕೂ  ಎಸೆತಗಳನ್ನು ಬ್ಯಾಟಿಂಗ್ ಅಭ್ಯಾಸ ಮಾಡುತ್ತಾರೆ. ಥ್ರೋಡೌನ್, ಯಂತ್ರ ಮತ್ತು ಬೌಲರ್‌ಗಳ ಎಸೆತಗಳನ್ನು ಎದುರಿಸುತ್ತಾರೆ. ಫೀಲ್ಡಿಂಗ್‌ನಲ್ಲಿಯೂ ಚುರುಕಾಗಿದ್ದಾರೆ.  

‘ಕ್ರಿಕೆಟ್‌ನಲ್ಲಿ ಅಷ್ಟೇ ಅಲ್ಲ. ಓದಿನಲ್ಲಿಯೂ ಮುಂದಿದ್ದಾರೆ. ಹತ್ತನೇ ತರಗತಿಯಲ್ಲಿದ್ದಾಗ ವಯೋಮಿತಿಯ ಟೂರ್ನಿಗಳಲ್ಲಿ ಆಡುತ್ತಿದ್ದರು. ಒಂದಿಷ್ಟೂ ಬಿಡುವು ಇರಲಿಲ್ಲ.  ‍ಪಂದ್ಯ ಆಡಲು ಹೋದಲ್ಲೆಲ್ಲ ಪುಸ್ತಕಗಳನ್ನು ಒಯ್ಯುತ್ತಿದ್ದರು. ಮಿತಭಾಷಿಯಾಗಿರುವ ಅವರು ಬಿಡುವಾದಾಗಲೆಲ್ಲ ಓದುತ್ತಿದ್ದರು. ಐಸಿಎಸ್‌ಸಿ ಪಠ್ಯದಲ್ಲಿ ಶೇ 95ರಷ್ಟು ಅಂಕ ಗಳಿಸಿದ್ದರು. ಅವರ ಕುಟುಂಬವು ಕೇರಳ ಮೂಲದ್ದು. ಆದರೆ ದೇವದತ್ತ ಕನ್ನಡದಲ್ಲಿ ಚೆನ್ನಾಗಿ ಮಾತನಾಡುತ್ತಾರೆ’ ಎಂದು ಇರ್ಫಾನ್ ಹೇಳುತ್ತಾರೆ.

ಮೂರು ಟೆಸ್ಟ್‌ಗಳಲ್ಲಿ ಕೊನೆಯ ಪಕ್ಷ ಒಂದರಲ್ಲಾದರೂ ಪದಾರ್ಪಣೆಯ ಅವಕಾಶ ಸಿಗುತ್ತದೆ ಎಂಬ ಭರವಸೆ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.