ADVERTISEMENT

IND VS ENG: ಭಾರತಕ್ಕೆ ಇನಿಂಗ್ಸ್ ಹಾಗೂ 64 ರನ್ ಜಯ; ಸರಣಿ 4-1ರಲ್ಲಿ ಕೈವಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮಾರ್ಚ್ 2024, 8:59 IST
Last Updated 9 ಮಾರ್ಚ್ 2024, 8:59 IST
<div class="paragraphs"><p>ಟೀಮ್ ಇಂಡಿಯಾ ಆಟಗಾರರ ಸಂಭ್ರಮ</p></div>

ಟೀಮ್ ಇಂಡಿಯಾ ಆಟಗಾರರ ಸಂಭ್ರಮ

   

(ಪಿಟಿಐ ಚಿತ್ರ)

ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 64 ರನ್ ಅಂತರದ ಗೆಲುವು ದಾಖಲಿಸಿದೆ.

ADVERTISEMENT

ಆ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರ ಅಂತರದಿಂದ ವಶಪಡಿಸಿಕೊಂಡಿದೆ.

ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ 218 ರನ್‌ಗಳಿಗೆ ಉತ್ತರವಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 477 ರನ್ ಪೇರಿಸಿತ್ತು. ಇದರೊಂದಿಗೆ 259 ರನ್‌ಗಳ ಮಹತ್ವದ ಮುನ್ನಡೆ ಗಳಿಸಿತ್ತು.

ಇಂದು ಮೂರನೇ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್ (77ಕ್ಕೆ 5) ದಾಳಿಗೆ ಸಿಲುಕಿದ ಇಂಗ್ಲೆಂಡ್, ಎರಡನೇ ಇನಿಂಗ್ಸ್‌ನಲ್ಲಿ ಕೇವಲ 195 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿದ ಅಶ್ವಿನ್ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಸೇರಿದಂತೆ ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದರು. ಇನ್ನುಳಿದಂತೆ ಜಸ್‌ಪ್ರೀತ್ ಬೂಮ್ರಾ ಹಾಗೂ ಕುಲದೀಪ್ ಯಾದವ್ ತಲಾ ಎರಡು ಮತ್ತು ರವೀಂದ್ರ ಜಡೇಜ ಒಂದು ವಿಕೆಟ್ ಗಳಿಸಿದರು.

ಇಂಗ್ಲೆಂಡ್ ಪರ ಜೋ ರೂಟ್ ಗರಿಷ್ಠ 84 ರನ್ ಗಳಿಸಿದರು. ಜಾಕ್ ಕ್ರಾಲಿ (0), ಬೆನ್ ಡಕೆಟ್ (2), ಓಲಿ ಪೋಪ್ (19), ಜಾನಿ ಬೆಸ್ಟೊ (39), ನಾಯಕ ಬೆನ್ ಸ್ಟೋಕ್ಸ್ (2), ಬೆನ್ ಫೋಕ್ಸ್ (8), ಟಾಮ್ ಹಾರ್ಟ್ಲಿ (20), ಶೋಯಬ್ ಬಷೀರ್ (13) ನಿರಾಸೆ ಅನುಭವಿಸಿದರು.

ಈ ಮೊದಲು ಕುಲದೀಪ್ ಯಾದವ್ ವಿಕೆಟ್ ಗಳಿಸಿದ ಜೇಮ್ಸ್ ಆ್ಯಂಡರ್ಸನ್, ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಗಳಿಸಿದ ವಿಶ್ವದ ಮೊದಲ ವೇಗದ ಬೌಲರ್ ಎನಿಸಿದರು. ಒಟ್ಟಾರೆಯಾಗಿ ಮುತ್ತಯ್ಯ ಮುರಳೀಧರನ್ ಹಾಗೂ ಶೇನ್ ವಾರ್ನ್ ಬಳಿಕ ಈ ಸಾಧನೆ ಮಾಡಿದ ಮೂರನೇ ಬೌಲರ್ ಆಗಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿದ್ದ ಕುಲದೀಪ್ ಯಾದವ್, ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್ ಪಟ್ಟಿ:

ಇಂಗ್ಲೆಂಡ್ ಮೊದಲ ಇನಿಂಗ್ಸ್ 218ಕ್ಕೆ ಆಲೌಟ್ (ಜಾಕ್ ಕ್ರಾಲಿ 79, ಕುಲದೀಪ್ 72/5, ಅಶ್ವಿನ್ 51/4 )

ಭಾರತ ಮೊದಲ ಇನಿಂಗ್ಸ್ 477ಕ್ಕೆ ಆಲೌಟ್ (ಗಿಲ್ 110, ರೋಹಿತ್ 103, ಪಡಿಕ್ಕಲ್ 65, ಸರ್ಫರಾಜ್ 56, ಶೋಯಬ್ ಬಷೀರ್ 173/5)

ಇಂಗ್ಲೆಂಡ್ ಎರಡನೇ ಇನಿಂಗ್ಸ್ 195ಕ್ಕೆ ಆಲೌಟ್ (ಜೋ ರೂಟ್ 84, ಅಶ್ವಿನ್ 77/5 )

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.