ADVERTISEMENT

ಚೆಂಡು ಕೇಳಿ ಕುತೂಹಲ ಕೆರಳಿಸಿದ ದೋನಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 19:29 IST
Last Updated 18 ಜುಲೈ 2018, 19:29 IST
ಮಹೇಂದ್ರ ಸಿಂಗ್ ದೋನಿ
ಮಹೇಂದ್ರ ಸಿಂಗ್ ದೋನಿ   

ಲೀಡ್ಸ್‌ (ಪಿಟಿಐ): ಭಾರತ ಕ್ರಿಕೆಟ್ ತಂಡದ ವಿಕೆಟ್‌ ಕೀಪರ್–ಬ್ಯಾಟ್ಸ್‌ ಮನ್ ಮಹೇಂದ್ರ ಸಿಂಗ್ ದೋನಿ ಅವರು ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲಿದ್ದಾರೆಯೇ?

ಬುಧವಾರ ಇಡೀ ‌ದಿನ ಚರ್ಚೆಗೆ ಗ್ರಾಸವಾದ ವಿಷಯ ಇದು. ಮಂಗಳವಾರ ಇಂಗ್ಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯದ ನಂತರ ಅಂಪೈರ್‌ ಬಳಿಯಿದ್ದ ಚೆಂಡನ್ನು ಪಡೆದುಕೊಂಡು 37 ವರ್ಷದ ಮಹೇಂದ್ರ ಸಿಂಗ್ ದೋನಿ ಪೆವಿಲಿಯನ್‌ಗೆ ತೆರಳಿದ್ದು ಇದಕ್ಕೆ ಕಾರಣ.

ಯಾವುದೇ ಪಂದ್ಯದಲ್ಲಿ ತಂಡವು ಗೆದ್ದಾಗ ದೋನಿ ಅವರು ಸ್ಟಂಪ್ ಕಿತ್ತುಕೊಂಡು ಹೋಗುವುದು ಹೊಸದಲ್ಲ. ಆದರೆ ಈ ಪಂದ್ಯದ ನಂತರ ಆಟಗಾರರೆಲ್ಲ ಕ್ರೀಡಾಂಗಣದಿಂದ ಹೊರಗೆ ತೆರಳಿದ ಮೇಲೆ ಅಂಪೈರ್‌ ಬಳಿ ಚೆಂಡು ಕೇಳಿ ಪಡೆಯುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 30 ಸೆಕೆಂಡುಗಳ ಈ ವಿಡಿಯೊ ತುಣುಕನ್ನು ಬಹಳಷ್ಟು ಜನರು ನೋಡಿದ್ದಾರೆ.

ADVERTISEMENT

ಆದರೆ ಈ ಸುದ್ದಿಯನ್ನು ತಳ್ಳಿ ಹಾಕಿರುವ ಬಿಸಿಸಿಐ, ‘ಇದು ಬರೀ ಊಹೆಯಷ್ಟೇ’ ಎಂದಿದೆ.

2014ರಲ್ಲಿ ದೋನಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಏಕದಿನ, ಟ್ವೆಂಟಿ–20 ಕ್ರಿಕೆಟ್‌ ತಂಡದಲ್ಲಿ ಮುಂದುವರಿದಿದ್ದರು. ಹೋದ ವರ್ಷ ನಿಗದಿತ ಓವರ್‌ಗಳ ಕ್ರಿಕೆಟ್‌ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.