ಮುಂಬೈ: ಕ್ರಿಕೆಟರ್ ಎಂ.ಎಸ್.ಧೋನಿ ಅವರು ಇತ್ತೀಚೆಗೆ ತಮ್ಮ 42ನೇ ಜನ್ಮದಿವನ್ನು ಆಚರಿಸಿಕೊಂಡರು. ಈ ಆಚರಣೆಯನ್ನು ಸೆಲೆಬ್ರೆಟಿ ಅಥವಾ ಕ್ರಿಕೆಟರ್‌ಗಳ ಬದಲಿಗೆ ತಮ್ಮನ್ನು ಅಪಾರವಾಗಿ ಪ್ರೀತಿಸುವ ನೆಚ್ಚಿನ ನಾಯಿಗಳೊಂದಿಗೆ ಆಚರಿಸಿಕೊಂಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜನ್ಮದಿನದಂದು ಧೋನಿ ಅವರ ಹಲವು ವಿಡಿಯೊಗಳು ಹರಿದಾಡಿದವು. ಅವುಗಳಲ್ಲಿ ಟ್ರ್ಯಾಕ್ಟರ್ ಏರಿ ಉಳುಮೆ ಮಾಡುತ್ತಿದ್ದ ದೃಶ್ಯ ಹಾಗೂ ತಮಗಾಗಿ ಮನೆ ಎದುರು ಕಾಯುತ್ತಿದ್ದ ಅಭಿಮಾನಿಗಳಿಗೆ ಮೇಲ್ಛಾವಣಿಯಿಂದ ಕೈ ಬೀಸಿ ಧನ್ಯವಾದ ಹೇಳಿದ ದೃಶ್ಯಗಳೂ ಇದ್ದವು.
ಇದೀಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಸುಂದರವಾದ ವಿಡಿಯೊ ಹಂಚಿಕೊಂಡಿರುವ @mahi7781, ತಮ್ಮ ಪ್ರೀತಿಯ ನಾಲ್ಕು ನಾಯಿಗಳ ಸಮ್ಮುಖದಲ್ಲಿ ಕೇಕು ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ.
ಮುಂಬತ್ತಿ ಆರಿಸಿ ಕೇಕು ಕತ್ತರಿಸುವವರೆಗೂ ಕುತೂಹಲ ಹಾಗೂ ಸಂಮಯ ಕಾಯ್ದುಕೊಂಡ ನಾಯಿಗಳು, ಬಾಲ ಅಲ್ಲಾಡಿಸುತ್ತಾ ನೆಚ್ಚಿನ ಮಾಲೀಕನಿಗೆ ಶುಭಾಶಯ ಕೋರಿದವು. ಕೇಕು ಕತ್ತರಿಸಿದ ನಂತರ ಧೋನಿ ನಾಲ್ಕೂ ನಾಯಿಗಳಿಗೆ ಕೇಕುಗಳ ತುಂಡುಗಳನ್ನು ನೀಡಿದರು.
350 ಒಂದು ದಿನದ ಕ್ರಿಕೆಟ್ ಆಡಿರುವ ಧೋನಿ, 50.57 ಸರಾಸರಿಯಂತೆ ಒಟ್ಟು 10,773 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕ ಹಾಗೂ 73 ಅರ್ಧ ಶತಕಗಳೂ ಸೇರಿವೆ. ಮ್ಯಾಚ್ ಒಂದರಲ್ಲಿ ಗರಿಷ್ಠ 183 ರನ್ ಕಲೆ ಹಾಕಿದ್ದು ಅವರ ಅತ್ಯುತ್ತಮ ಸ್ಕೋರ್ ಆಗಿದೆ.
ನಾಯಕನಾಗಿ ಧೋನಿ ಆಡಿರುವ 200 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ 110 ಪಂದ್ಯಗಳನ್ನು ಗೆದ್ದಿದೆ. 74ರಲ್ಲಿ ಪರಾಭವಗೊಂಡಿದೆ. 11 ಪಂದ್ಯಗಳು ಡ್ರಾ ಆಗಿವೆ. ಆ ಮೂಲಕ ಅವರ ಜಯದ ಸರಾಸರಿ ಶೇ 55ರಷ್ಟಿದೆ. 2011ರಲ್ಲಿ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ ಟ್ರೋಫಿ ಅವರ ನಾಯಕತ್ವದಲ್ಲಿ ಭಾರತಕ್ಕೆ ಲಭಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.