ಜೈಪುರ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅವರಿಗೆ ಪಂದ್ಯದ ಸಂಭಾವನೆಯ ಶೇ 50ರಷ್ಟು ದಂಡ ವಿಧಿಸಲಾಗಿದೆ.
ಗುರುವಾರ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಚೆನ್ನೈ ತಂಡವು ನಾಲ್ಕು ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿತ್ತು.
ಆದರೆ, ಈ ಪಂದ್ಯದ ಕೊನೆಯ ಓವರ್‌ನಲ್ಲಿ ನಡೆದ ನಾಟಕೀಯ ಬೆಳವಣಿಗೆಯು ಹೆಚ್ಚು ಗಮನ ಸೆಳೆಯಿತು. ಚೆನ್ನೈನ ಮಿಚೆಲ್ ಸ್ಯಾಂಟನರ್ ಅವರಿಗೆ ರಾಜಸ್ಥಾನ್ ತಂಡದ ಬೆನ್ ಸ್ಟೋಕ್ಸ್ ಹಾಕಿದ ಎಸೆತವನ್ನು ಅಂಪೈರ್ ಉಲ್ಲಾಸ ಗಂಧೆ ಅವರು ನೋಬಾಲ್ ಎಂದು ಸಂಜ್ಞೆ ಮಾಡಿದ್ದರು.
ಆದರೆ ಸ್ಕ್ವೆರ್ ಲೆಗ್ ಅಂಪೈರ್ ಆಕ್ಸೆನ್‌ಫೋರ್ಡ್ ಅವರು ನೋಬಾಲ್ ನಿರಾಕರಿಸಿದ್ದರು. ಈ ಸಂದರ್ಭದಲ್ಲಿ ಚೆನ್ನೈ ಬ್ಯಾಟ್ಸ್‌ಮನ್ ರವೀಂದ್ರ ಜಡೇಜ ಅವರು ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದರು. ಇದೇ ಸಂದರ್ಭದಲ್ಲಿ ಡಗ್‌ಔಟ್‌ನಲ್ಲಿದ್ದ ಧೋನಿ ಮೈದಾನಕ್ಕೆ ಧಾವಿಸಿ ಬಂದು ಅಂಪೈರ್‌ಗಳ ಜೊತೆಗೆ ವಾದಕ್ಕಿಳಿದರು. ಇದು 2.20ರ ನಿಯಮದ ಉಲ್ಲಂಘನೆಯಾಗಿದೆ.
ಐಸಿಸಿ ನೀತಿಸಂಹಿತೆಯು ಐಪಿಎಲ್‌ಗೂ ಅನ್ವಯವಾಗುತ್ತದೆ. ಅಂಪೈರ್ ತೀರ್ಪಿಗೆ ಆಟಗಾರರು ತಕರಾರು ವ್ಯಕ್ತಪಡಿಸಿದರೆ ಒಂದು ಅಥವಾ ಎರಡು ಪಂದ್ಯಗಳ ನಿಷೇಧ ಹೇರುವ ಅವಕಾಶವೂ ಇದೆ. ಆದರೆ, ಧೋನಿಗೆ ಪಂದ್ಯ ನಿಷೇಧ ಹಾಕಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಪ್ರಸಕ್ತ ಆವೃತ್ತಿಯ ಐಪಿಎಲ್‌ನ ಅಂಪೈರ್ ನಿರ್ಧಾರಗಳು ವಿವಾದಕ್ಕೆ ಕಾರಣವಾಗಿವೆ. ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದ ಕೊನೆಯ ಎಸೆತದಲ್ಲಿ ಲಸಿತ್ ಮಾಲಿಂಗ ಹಾಕಿದ್ದ ನೋಬಾಲ್ ಅನ್ನು ಅಂಪೈರ್ ಎಸ್. ರವಿ ನೀಡಿರಲಿಲ್ಲ. ಆ ಘಟನೆಯು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
***
ನಾನು ಧೋನಿಯನ್ನು ಗೌರವಿಸುವ ವ್ಯಕ್ತಿ. ಅವರು ಮೈದಾನಕ್ಕೆ ಧಾವಿಸಿದ್ದು ಸರಿಯಲ್ಲ. ಸಣ್ಣ ದಂಡ ಶಿಕ್ಷೆಗೆ ಗುರಿಯಾಗಿದ್ದಾರೆ. ನಿಜಕ್ಕೂ ಅದೃಷ್ಟವಂತರು.
-ಸಂಜಯ್ ಮಾಂಜ್ರೇಕರ್, ಕ್ರಿಕೆಟ್ ವೀಕ್ಷಕ ವಿವರಣೆಕಾರ
***
ಕ್ರೀಡೆಯ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ನಾಯಕರಾದವರು ಡಗ್‌ಔಟ್‌ನಿಂದ ಈ ರೀತಿ ಪಿಚ್‌ನತ್ತ ಹೋಗುವುದು ಸರಿಯಲ್ಲ.
-ಮೈಕೆಲ್ ವಾನ್, ಇಂಗ್ಲೆಂಡ್ ಕ್ರಿಕೆಟಿಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.