ADVERTISEMENT

ಸಿಎಸ್‌ಕೆ ಬೌಲರ್‌ಗಳಿಂದಾಗಿ ಧೋನಿಗೆ ಸಂಕಷ್ಟ: ವೀರೇಂದ್ರ ಸೆಹ್ವಾಗ್

ಪಿಟಿಐ
Published 18 ಏಪ್ರಿಲ್ 2023, 16:23 IST
Last Updated 18 ಏಪ್ರಿಲ್ 2023, 16:23 IST
   

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್‌ ಬೌಲರ್‌ಗಳು ಕಳಪೆ ಬೌಲಿಂಗ್ ಮಾಡುವ ಮೂಲಕ ನಾಯಕ ಮಹೇಂದ್ರಸಿಂಗ್ ಧೋನಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಬೌಲರ್‌ಗಳು ಆದಷ್ಟು ಬೇಗ ಸುಧಾರಿಸಿಕೊಳ್ಳಬೇಕು ಎಂದು ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ದೊಡ್ಡ ಮೊತ್ತ ಪೇರಿಸಿತ್ತು. ಆದರೆ ಚೆನ್ನೈ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿರಲಿಲ್ಲ. ಇದರಿಂದಾಗಿ ಚೆನ್ನೈ ತಂಡವು ಪ್ರಯಾಸದ ಜಯ ಸಾಧಿಸಿತು.
‘ವೈಡ್ ಮತ್ತು ನೋಬಾಲ್‌ಗಳನ್ನು ಕಡಿಮೆ ಮಾಡಬೇಕು. ರನ್‌ಗಳನ್ನು ಬಿಟ್ಟುಕೊಡಬಾರದು. ಬಿಗಿ ದಾಳಿ ನಡೆಸಬೇಕು ಎಂದು ಧೋನಿ ಈ ಹಿಂದೆಯೇ ತಮ್ಮ ಬೌಲರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಯುವ ಬೌಲರ್‌ಗಳು ಕಳಪೆ ಬೌಲಿಂಗ್ ಮಾಡಿದ್ದಾರೆ. ವೈಡ್‌ಗಳನ್ನು ಹೆಚ್ಚು ಹಾಕಿದ್ದಾರೆ. ಇದೇ ರೀತಿ ಮುಂದುವರಿದರೆ ನಾಯಕ ಧೋನಿ ಮುಂದೊಂದು ದಿನ ಆಮಾನತು ಶಿಕ್ಷೆಗೊಳಗಾಗಬಹುದು’ ಎಂದು ಸೆಹ್ವಾಗ್ ಕಳವಳ ವ್ಯಕ್ತಪಡಿಸಿದ್ದಾರೆ.

‘ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಚೆನ್ನೈ ಬೌಲರ್‌ಗಳೂ 37 ಡಾಟ್ ಬಾಲ್ ಹಾಕಿದ್ದಾರೆ. ಆದರೂ ಬೆಂಗಳೂರು ತಂಡವು 8 ವಿಕೆಟ್‌ಗಳಿಗೆ 218 ರನ್‌ ಗಳಿಸಿತು. ಇದರರ್ಥ ಕೇವಲ 14 ಓವರ್‌ಗಳಲ್ಲಿ ಇಷ್ಟು ಪ್ರಮಾಣದ ರನ್‌ಗಳು ಸೇರಿದವು. ಅಲ್ಲದೇ ಆರು ವೈಡ್‌ಬಾಲ್‌ಗಳನ್ನೂ ಹಾಕಿದ್ದಾರೆ. ಇದು ಸುಧಾರಣೆಯಾಗಬೇಕು. ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಪೇರಿಸಿದ ಮೇಲೂ ಬೌಲರ್‌ಗಳು ಕೈಚೆಲ್ಲಬಾರದು’ ಎಂದು ಕ್ರಿಕ್‌ಬಜ್ ಶೋನಲ್ಲಿ ಸೆಹ್ವಾಗ್ ಹೇಳಿದ್ದಾರೆ.

ADVERTISEMENT

ಚೆನ್ನೈ ತಂಡದ ಮಧ್ಯಮವೇಗಿಗಳಾದ ದೀಪಕ್ ಚಾಹರ್, ಮುಖೇಶ್ ಚೌಧರಿ ಹಾಗೂ ಸಿಸಾಂದ ಮಗಾಲ ಅವರು ಗಾಯಗೊಂಡಿದ್ದಾರೆ. ಬೆನ್‌ ಸ್ಟೋಕ್ಸ್‌ ಮಂಡಿನೋವು ಇರುವುದರಿಂದ ಬೌಲಿಂಗ್ ಮಾಡುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.