ನವದೆಹಲಿ: ಪುದುಚೇರಿ ಎದುರು ರಣಜಿ ಟ್ರೋಫಿ ಮೊದಲ ಪಂದ್ಯದಲ್ಲೇ ದೆಹಲಿ ತಂಡ 9 ವಿಕೆಟ್‌ಗಳ ಹೀನಾಯ ಸೋಲನುಭವಿಸಿದ ಕೆಲವೇ ಗಂಟೆಗಳಲ್ಲಿ ಯಶ್ ಧುಲ್ ಅವರು ನಾಯಕ ಸ್ಥಾನ ಕಳೆದುಕೊಂಡಿದ್ದಾರೆ. ಅವರ ಸ್ಥಾನಕ್ಕೆ ಅನುಭವಿ ಬ್ಯಾಟರ್ ಹಿಮ್ಮತ್ ಸಿಂಗ್ ಆಯ್ಕೆಯಾಗಿದ್ದಾರೆ.
ದೆಹಲಿ ತನ್ನ ಮುಂದಿನ ಪಂದ್ಯವನ್ನು ಜನವರಿ 12ರಿಂದ ಜಮ್ಮ ಮತ್ತು ಕಾಶ್ಮೀರ ತಂಡದ ವಿರುದ್ಧ ಜಮ್ಮುವಿನಲ್ಲಿ ಆಡಲಿದೆ.
19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ಭಾರತ ತಂಡದ ನೇತೃತ್ವ ವಹಿಸಿದ್ದ ಧುಲ್ 2022ರ ಡಿಸೆಂಬರ್‌ನಿಂದ ದೆಹಲಿ ತಂಡದ ನಾಯಕರಾಗಿದ್ದರು. ಅವರು 43.88 ಸರಾಸರಿಯಲ್ಲಿ 1,185 ರನ್ ಗಳಿಸಿದ್ದಾರೆ. 21 ವರ್ಷದ ಆಟಗಾರ, ಪುದುಚೇರಿ ವಿರುದ್ಧ ತವರಿನಲ್ಲಿ ನಡೆದ ಪಂದ್ಯದ ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 2 ಮತ್ತು 23 ರನ್ ಗಳಿಸಿದ್ದರು.
‘ಯಶ್ ಪ್ರತಿಭಾನ್ವಿತ ಆಟಗಾರ. ಆದರೆ ಫಾರ್ಮಿನಲ್ಲಿಲ್ಲ. ಅವರು ಬ್ಯಾಟರ್ ಆಗಿ ಚೆನ್ನಾಗಿ ಆಡಬೇಕೆಂದು ನಮ್ಮ ಬಯಕೆ. ಅದಕ್ಕಾಗಿ ಅವರ ಮೇಲಿದ್ದ ನಾಯಕತ್ವದ ಹೊಣೆ ಇಳಿಸಲಾಗಿದೆ. ಹಿಮ್ಮತ್ ಸೀನಿಯರ್ ಆಟಗಾರ. ತಂಡದ ಪರ ಉತ್ತಮ ಆಟವಾಡಿದ್ದಾರೆ. ಅವರು ನಾಯಕತ್ವ ವಹಿಸಲಿದ್ದಾರೆ’ ಎಂದು ಡೆಲ್ಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಜಂಟಿ ಕಾರ್ಯದರ್ಶಿ ರಾಜನ್ ಮನ್‌ಚಂದಾ ಸುದ್ದಿಸಂಸ್ಥೆಗೆ ತಿಳಿಸಿದರು.
ಏಳು ಬಾರಿ ರಣಜಿ ಚಾಂಪಿಯನ್ ಆಗಿರುವ ದೆಹಲಿ ತಂಡ ಬೇಡದ ಕಾರಣಗಳಿಂದ ಸುದ್ದಿಯಲ್ಲಿ ಇರುತ್ತಿದೆ. ಕಳೆದ ಋತುವಿನಲ್ಲಿ ಹಿರಿಯ ಆಟಗಾರರಾದ ನಿತೀಶ್ ರಾಣಾ ಮತ್ತು ಧ್ರುವ್ ಶೋರೆ ತಂಡ ತೊರೆದು ಕ್ರಮವಾಗಿ ಉತ್ತರ ಪ್ರದೇಶ ಮತ್ತು ವಿದರ್ಭಕ್ಕೆ ವಲಸೆ ಹೋಗಿದ್ದರು.
ಈ ಬಾರಿ ವೇಗದ ಬೌಲರ್ ಇಶಾಂತ್ ಶರ್ಮಾ ತವರಿನ ಪಂದ್ಯಗಳಿಗೆ ಮಾತ್ರ ಲಭ್ಯರಿರುತ್ತಾರೆ ಎಂದು ಹೇಳಲಾಗಿದೆ. ನವದೀಪ್ ಸೈನಿ ಅವರು ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದು, ದೆಹಲಿಯ ಮುಂದಿನ ಪಂದ್ಯಕ್ಕೆ ಲಭ್ಯರಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.