ನವದೆಹಲಿ: 18 ತಿಂಗಳ ಕಾಲ ಹೊರಗಿಳಿದು ತಂಡಕ್ಕೆ ಸೇರ್ಪಡೆಗೊಂಡಿರುವ ಅಜಿಂಕ್ಯ ರಹಾನೆ ಅವರನ್ನು ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ. ಆಯ್ಕೆದಾರರ ಈ ನಿರ್ಧಾರವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ದೀರ್ಘ ಸಮಯದಿಂದ ತಂಡದಿಂದ ಹೊರಗುಳಿದಿದ್ದ 35 ವರ್ಷದ ರಹಾನೆ, ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬ್ಯಾಟಿಂಗ್ ಲಯ ಕಂಡುಕೊಂಡಿದ್ದರು. ಇದರ ಬೆನ್ನಲ್ಲೇ ಅವರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕಾಗಿ ಭಾರತ ತಂಡಕ್ಕೆ ಪುನರಾಯ್ಕೆ ಆಗಿದ್ದರು.
ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್‌ನಲ್ಲಿ ಭಾರತ ಸೋತರೂ ಟೀಮ್ ಇಂಡಿಯಾ ಪರ ರಹಾನೆ ಟಾಪ್ ಸ್ಕೋರರ್ ಎನಿಸಿದ್ದರು. ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 89 ಹಾಗೂ 46 ರನ್ ಗಳಿಸಿದರು.
ಅಲ್ಲದೆ ಮುಂಬರುವ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಹಾನೆ ಅವರನ್ನು ಟೀಮ್ ಇಂಡಿಯಾದ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಈ ಕುರಿತು ಲಂಡನ್‌ನಲ್ಲಿ ಸಂದರ್ಶನದ ವೇಳೆ ಪ್ರತಿಕ್ರಿಯಿಸಿರುವ ಗಂಗೂಲಿ, ಶುಭಮನ್ ಗಿಲ್ ಅವರಂತಹ ಪ್ರತಿಭಾವಂತ ಆಟಗಾರರನ್ನು ಬೆಳೆಸುವುದು ಸೂಕ್ತವಲ್ಲವೇ ಎಂದು ಕೇಳಿದ್ದಾರೆ.
ರಹಾನೆಗೆ ಉಪನಾಯಕ ಪಟ್ಟ ನೀಡಿರುವುದು ತಪ್ಪಾದ ನಿರ್ಣಯ ಎಂದು ಹೇಳಲಾರೆ. ಆದರೆ 18 ತಿಂಗಳ ಕಾಲ ತಂಡದಿಂದ ಹೊರಗುಳಿದು ಒಂದು ಟೆಸ್ಟ್ ಪಂದ್ಯವನ್ನಷ್ಟೇ ಆಡಿದ ಆಟಗಾರನಿಗೆ ಉಪನಾಯಕ ಪಟ್ಟ ನೀಡಲಾಗಿದೆ. ಇದರ ಹಿಂದಿನ ನೀತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲಿ ರವೀಂದ್ರ ಜಡೇಜ ಅವರಂತಹ ಆಟಗಾರರು ಇದ್ದಾರೆ. ಖಂಡಿತವಾಗಿಯೂ ದೀರ್ಘಕಾಲದಿಂದ ಜಡೇಜ ಟೆಸ್ಟ್ ತಂಡದ ಭಾಗವಾಗಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.
ಆಯ್ಕೆ ವಿಚಾರವು ಅಸ್ಥಿರ ಆಗಿರಬಾರದು. ಆಯ್ಕೆಯಲ್ಲಿ ಸ್ಥಿರತೆ ಇರಬೇಕು ಎಂದು ಬಿಸಿಸಿಐ ಮಾಜಿ ಅಧ್ಯಕ್ಷರೂ ಆಗಿರುವ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.