ನವದೆಹಲಿ: ವಿಕೆಟ್‌ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಕ್ರಿಕೆಟ್ ವಲಯದಲ್ಲಿ ‘ಮ್ಯಾನ್ ಆಫ್ ಕಮ್‌ಬ್ಯಾಕ್’ ಎಂದೇ ಪ್ರಸಿದ್ಧರು.
ಅಂತರರಾಷ್ಟ್ರೀಯ, ದೇಶಿ ಅಥವಾ ಐಪಿಎಲ್ ಟೂರ್ನಿಯಲ್ಲಿ ಅವರ ಸಾಧನೆಗಳನ್ನು ಅವಲೋಕಿಸಿದಾಗ ಈ ಮಾತು ನಿಜ ಎನಿಸದಿರದು. ತಮಿಳುನಾಡಿನ ದಿನೇಶ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಲು ಆರಂಭಿಸಿದ್ದರು. ಆ ಹೊತ್ತಿನಲ್ಲಿ ಪ್ರವರ್ಧಮಾನಕ್ಕೆ ಬಂದ ಮಹೇಂದ್ರಸಿಂಗ್ ಧೋನಿಯೊಂದಿಗಿನ ಪೈಪೋಟಿಯಲ್ಲಿ ದಿನೇಶ್ ಹಿಂದೆ ಬಿದ್ದರು. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕಳೆದ 17 ವರ್ಷಗಳಿಂದ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರು ಫ್ರ್ಯಾಂಚೈಸಿಗಳಲ್ಲಿ ಆಡಿದ್ದಾರೆ.
ಅಹಮದಾಬಾದಿನಲ್ಲಿ ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್ ಎದುರು ಸೋಲುವುದರೊಂದಿಗೆ ಡಿ.ಕೆ (ದಿನೇಶ್ ಕಾರ್ತಿಕ್) ವೃತ್ತಿಜೀವನಕ್ಕೂ ತೆರೆಬಿದ್ದಂತಾಗಿದೆ. ಪಂದ್ಯದ ನಂತರ ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಗಾರರು ದಿನೇಶ್ ಅವರನ್ನು ಆಲಂಗಿಸಿಕೊಂಡು ಅಭಿನಂದಿಸಿದರು. ಪ್ರೇಕ್ಷಕರತ್ತ ಕೈಬೀಸುತ್ತಲೇ ದಿನೇಶ್ ಡ್ರೆಸ್ಸಿಂಗ್ ರೂಮ್‌ನತ್ತ ಹೆಜ್ಜೆಹಾಕಿದರು. 20 ವರ್ಷಗಳ ವೃತ್ತಿಜೀವನಕ್ಕೊಂದು ವಿರಾಮ ಬಿದ್ದಿದೆ.
26 ಟೆಸ್ಟ್, 94 ಏಕದಿನ ಹಾಗೂ 60 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಹಾದಿಯಲ್ಲಿ ಅವರು ಯುವ ಆಟಗಾರರೊಂದಿಗೆ ಸ್ಪರ್ಧಿಸಿಯೂ ಭಾರತ ತಂಡಕ್ಕೆ ಮರಳಿದ ಉದಾಹರಣೆಗಳಿವೆ.
ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಗುರಿ ಹೊಂದಿದ್ದ ಅವರು ಈ ಬಾರಿ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಅಬ್ಬರಿಸಿದ್ದರು. ಆದರೆ ವಿಕೆಟ್‌ಕೀಪರ್ ಸ್ಥಾನಕ್ಕೆ ಆಯ್ಕೆ ಸಮಿತಿಯು ಯುವ ಆಟಗಾರರಿಗೆ ಮಣೆ ಹಾಕಿತು. ದಿನೇಶ್‌ಗೆ ಸ್ಥಾನ ಸಿಗಲಿಲ್ಲ.
ಹೋದ ಫೆಬ್ರುವರಿ–ಮಾರ್ಚ್‌ನಲ್ಲಿ ಭಾರತ –ಇಂಗ್ಲೆಂಡ್ ಟೆಸ್ಟ್ ಸರಣಿ ಸಂದರ್ಭದಲ್ಲಿ ದಿನೇಶ್ ಟಿ.ವಿ. ಕಾಮೆಂಟ್ರಿ ಕೂಡ ಮಾಡಿದ್ದರು. ಆಗಲೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ಸಿದ್ಧರಾಗಿದ್ದರೆನ್ನಲಾಗಿದೆ.
2004ರಲ್ಲಿ ಅವರು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಎದುರಿನ ಏಕದಿನ ಪಂದ್ಯದಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ್ದರು. ಆಗ ಅವರಿಗೆ 19 ವರ್ಷವಾಗಿತ್ತು. ಇಂಗ್ಲೆಂಡ್ ತಂಡದ ನಾಯಕ ಮೈಕೆಲ್ ವಾನ್ ಅವರನ್ನು ಮಿಂಚಿನ ಸ್ಪಂಪಿಂಗ್ ಮಾಡುವ ಮೂಲಕ ತಮ್ಮ ಚೊಚ್ಚಲ ಪಂದ್ಯವನ್ನು ಅವಿಸ್ಮರಣೀಯಗೊಳಿಸಿಕೊಂಡಿದ್ದರು. 2019ರಲ್ಲಿ ಅವರು ಮ್ಯಾಂಚೆಸ್ಟರ್‌ನಲ್ಲಿ ನ್ಯೂಜಿಲೆಂಡ್ ಎದುರು ಕೊನೆಯ ಏಕದಿನ ಪಂದ್ಯವಾಡಿದ್ದರು.
ಅದಾಗಿ ಮೂರು ತಿಂಗಳುಗಳ ನಂತರ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದರು. 2018ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಎದುರು ಕೊನೆಯ ಬಾರಿಗೆ ಟೆಸ್ಟ್‌ನಲ್ಲಿ ಆಡಿದ್ದರು. ಟೆಸ್ಟ್‌ನಲ್ಲಿ ಒಂದು ಶತಕ ಗಳಿಸಿದ್ದಾರೆ.
2006ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು.
ತಮ್ಮ ಫಾರ್ಮ್‌ನಲ್ಲಿ ಏರಿಳಿತ ಹಾಗೂ ಮಹೇಂದ್ರಸಿಂಗ್ ಧೋನಿಯವರ ಯಶಸ್ಸಿ ಓಟದಲ್ಲಿಯೂ ದಿನೇಶ್ ಭಾರತ ತಂಡದಲ್ಲಿ ಆಗಾಗ ಸ್ಥಾನ ಪಡೆದು ಮಿಂಚಿದರು.
ಕೊಲಂಬೊದಲ್ಲಿ 2018ರಲ್ಲಿ ನಡೆದಿದ್ದ ನಿಧಾಸ್ ಟ್ರೋಫಿ ಟೂರ್ನಿಯಲ್ಲಿ ಅವರು ಕೊನೆಯ ಎಸೆತದಲ್ಲಿ ಸಿಕ್ಸ್ ಹೊಡೆದು ಭಾರತ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದ್ದರು. 2019 ಏಕದಿನ ವಿಶ್ವಕಪ್, 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಅವರು ಆಡಿದ್ದರು.
ಈ ಬಾರಿಯ ಐಪಿಎಲ್‌ನಲ್ಲಿ ಅವರು 15 ಪಂದ್ಯಗಳಿಂದ 326 ರನ್ ಗಳಿಸಿದ್ದಾರೆ. 187ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ಗಳನ್ನು ಪೇರಿಸಿದ್ದಾರೆ.
ಶೀಘ್ರದಲ್ಲಿಯೇ ಅವರು ಮತ್ತೆ ಟಿ.ವಿ. ಕಾಮೆಂಟ್ರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.