ADVERTISEMENT

Dinesh Karthik: ಕ್ರಿಕೆಟ್‌ಗೆ ವಿದಾಯ ಹೇಳಿದ ದಿನೇಶ್ ಕಾರ್ತಿಕ್

ಪಿಟಿಐ
Published 1 ಜೂನ್ 2024, 14:51 IST
Last Updated 1 ಜೂನ್ 2024, 14:51 IST
<div class="paragraphs"><p>ದಿನೇಶ್ ಕಾರ್ತಿಕ್</p></div>

ದಿನೇಶ್ ಕಾರ್ತಿಕ್

   

ಪಿಟಿಐ ಚಿತ್ರ

ಚೆನ್ನೈ: ಎರಡು ದಶಕಗಳ ಕಾಲ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದ ಮಾಜಿ ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್,  ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಶನಿವಾರ ವಿದಾಯ ಹೇಳಿದರು.  

ADVERTISEMENT

ವೆಸ್ಟ್‌ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಐಪಿಎಲ್ ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರಬಿದ್ದ ಬಳಿಕ ಕಾರ್ತಿಕ್ ತಮ್ಮ ನಿವೃತ್ತಿ ಬಗ್ಗೆ ನಿರ್ಧರಿಸಿದ್ದರು. ಅಧಿಕೃತವಾಗಿ ತಿಳಿಸಲು ತಮ್ಮ 39ನೇ ಜನ್ಮದಿನವನ್ನು (ಜೂನ್ 1) ಆಯ್ಕೆ ಮಾಡಿಕೊಂಡಿದ್ದಾರೆ. 

2004ರಲ್ಲಿ ಅವರು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಎದುರಿನ  ಏಕದಿನ ಪಂದ್ಯದಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್ ತಂಡದ ನಾಯಕ ಮೈಕೆಲ್ ವಾನ್ ಅವರನ್ನು ಮಿಂಚಿನ ಸ್ಪಂಪಿಂಗ್ ಮಾಡುವ ಮೂಲಕ ತಮ್ಮ ಚೊಚ್ಚಲ ಪಂದ್ಯವನ್ನು ಅವಿಸ್ಮರಣೀಯಗೊಳಿಸಿಕೊಂಡಿದ್ದರು.

ರೋಹಿತ್ ಶರ್ಮಾ ನಾಯಕತ್ವದಲ್ಲಿ 2022ರ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಆಡಿದ್ದರು. ಈ ನಡುವೆ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ನಾಯಕತ್ವದಲ್ಲೂ ಆಡಿದ್ದಾರೆ.

‘ಕೆಲ ಸಮಯದಿಂದ ಸಾಕಷ್ಟು ಯೋಚಿಸಿದ ನಂತರ, ನಾನು ಸ್ಪರ್ಧಾತ್ಮಕ ಕ್ರಿಕೆಟ್ ಆಡುವುದನ್ನು ಮುಂದುವರಿಸದಿರಲು ನಿರ್ಧರಿಸಿದ್ದೇನೆ. ಅಧಿಕೃತವಾಗಿ ನನ್ನ ನಿವೃತ್ತಿಯನ್ನು ಘೋಷಿಸಿದ್ದೇನೆ’ ಎಂದು ಕಾರ್ತಿಕ್ 'ಎಕ್ಸ್' ನಲ್ಲಿ ಬರೆದಿದ್ದಾರೆ.

'ಈ ದೀರ್ಘ ಪ್ರಯಾಣವನ್ನು ಹಿತಮಯ ಮತ್ತು ಆನಂದಮಯವಾಗಿಸಿದ ಎಲ್ಲ ತರಬೇತುದಾರರು, ನಾನು ಆಡಿದ ತಂಡಗಳ ನಾಯಕರು, ಸಹ ಆಟಗಾರರು, ಸಹಾಯಕ ಸಿಬ್ಬಂದಿಗೆ ಆಭಾರಿಯಾಗಿರುವೆ. ನಮ್ಮ ದೇಶದಲ್ಲಿ ಕ್ರಿಕೆಟ್ ಆಡುವ ಲಕ್ಷಾಂತರ ಜನರ ಪೈಕಿ ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದ್ದಕ್ಕೆ ಹಾಗೂ ಈಗಲೂ ಬೆಂಬಲ ಸ್ವೀಕರಿಸುತ್ತಿರುವುದಕ್ಕೆ ನನ್ನನ್ನು ನಾನು ಅದೃಷ್ಟವಂತ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

ಮುಂದುವರಿದು, 'ಸದಾ ಬೆಂಬಲ ನೀಡುತ್ತಿರುವ ಪೋಷಕರೇ ನನ್ನ ಶಕ್ತಿಯಾಗಿದ್ದಾರೆ. ನಾನು ಇಂದು ಏನಾಗಿದ್ದೇನೋ ಅದು, ಅವರ ಆಶೀರ್ವಾದವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ. ಸ್ವತಃ ಕ್ರೀಡಾಳುವಾಗಿರುವ ಮತ್ತು ನನ್ನ ಪ್ರಯಾಣದಲ್ಲಿ ಜೊತೆಯಾಗಿ ಹೆಜ್ಜೆ ಇಡಲು, ತನ್ನ ವೃತ್ತಿಯನ್ನು (ಸ್ಕ್ವಾಷ್‌) ಅರ್ಧಕ್ಕೆ ನಿಲ್ಲಿಸಿದ ದೀಪಿಕಾಗೆ (ಪತ್ನಿ) ಋಣಿಯಾಗಿರುತ್ತೇನೆ' ಎಂದಿದ್ದಾರೆ.

'ಕ್ರಿಕೆಟ್‌ನ ಎಲ್ಲ ಅಭಿಮಾನಿಗಳು ಮತ್ತು ಬೆಂಬಲಿಗರಿಗೂ ಧನ್ಯವಾದಗಳು. ನಿಮ್ಮ ಹಾರೈಕೆ, ಬೆಂಬಲವಿಲ್ಲದೆ, ಕ್ರಿಕೆಟ್‌ ಮತ್ತು ಕ್ರಿಕೆಟರ್‌ಗಳು' ಇಲ್ಲ ಎಂದು ಭಾವುಕರಾಗಿದ್ದಾರೆ.

ಸಾಧನೆ
ತಮಿಳುನಾಡಿನವರಾದ ದಿನೇಶ್‌, ಭಾರತ ತಂಡದ ಪರ 26 ಟೆಸ್ಟ್‌, 94 ಏಕದಿನ ಹಾಗೂ 60 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಕ್ರಮವಾಗಿ 1,025 ರನ್‌, 1752 ರನ್‌ ಹಾಗೂ 686 ರನ್ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌, ಪಂಜಾಬ್‌ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತ್ತ ನೈಟ್‌ ರೈಡರ್ಸ್‌ ಪರ ಒಟ್ಟು 257 ಪಂದ್ಯಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. 22 ಅರ್ಧಶತಕ ಸಹಿತ 4,842 ರನ್‌ ಅವರ ಖಾತೆಯಲ್ಲಿವೆ.

ಕಳೆದ ಕೆಲವು ಆವೃತ್ತಿಗಳಲ್ಲಿ ಕೊನೇ ಹಂತದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಡಿ.ಕೆ. ಆರ್‌ಸಿಬಿ ಪಾಲಿನ 'ಆಪತ್ಭಾಂಧವ' ಎನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.