ಅಬುಧಾಬಿ: ಬೌಲಿಂಗ್ ಮಾಡುವ ಸಂದರ್ಭದಲ್ಲಿ ನಾನ್‌ಸ್ಟ್ರೈಕರ್ ತುದಿಯಲ್ಲಿರುವ ಬ್ಯಾಟ್ಸ್‌ಮನ್ ಕ್ರೀಸ್ ಬಿಟ್ಟರೆ ಔಟ್ ಮಾಡುವುದಕ್ಕೆ ಬಳಸುವ ‘ಮಂಕಡಿಂಗ್’ ಪದ ನಕಾರಾತ್ಮಕ ಅರ್ಥ ಹೊರಸೂಸುತ್ತದೆ. ಹೀಗಾಗಿ ಖ್ಯಾತ ಕ್ರಿಕೆಟಿಗ ವಿನೂ ಮಂಕಡ್ ಅವರ ಹೆಸರಿಗೆ ಅವಮಾನ ಮಾಡಿದಂತಾಗುತ್ತದೆ. ಆದ್ದರಂದ ಆ ಪದವನ್ನು ಬಳಸಬಾರದು ಎಂದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್, ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
1948ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಪಂದ್ಯವೊಂದರಲ್ಲಿ ನಾನ್‌ಸ್ಟ್ರೈಕರ್ ತುದಿಯಲ್ಲಿದ್ದ ಎದುರಾಳಿ ತಂಡದ ಬಿಲ್ ಬ್ರೌನ್ ಅವರನ್ನು ವಿನೂ ಮಂಕಡ್ ಅವರು ರನ್ ಔಟ್ ಮಾಡಿದ್ದರು. ಆಸ್ಟ್ರೇಲಿಯಾದ ಮಾಧ್ಯಮಗಳು ಇದನ್ನು ಟೀಕಿಸಿ ಈ ರೀತಿ ಔಟ್ ಮಾಡುವುದಕ್ಕೆ ‘ಮಂಕಡಿಂಗ್’ ಎಂದು ಹೆಸರಿಟ್ಟಿದ್ದವು. ಆದರೆ ಕ್ರಿಕೆಟ್ ದಂತಕತೆ ಸರ್ ಡಾನ್ ಬ್ರಾಡ್‌ಮನ್, ಸುನಿಲ್ ಗಾವಸ್ಕರ್ ಸೇರಿದಂತೆ ಹಲವರು ನಿಯಮಗಳ ಪ್ರಕಾರ ಅದು ಔಟ್ ಎಂದು ಪ್ರತಿಪಾದಿಸಿದ್ದರು.
ವಿನೂ ಮಂಕಡ್ ಅವರು ಪದೇ ಪದೇ ಎಚ್ಚರಿಕೆ ನೀಡಿದ ನಂತರ ಬಿಲ್ ಬ್ರೌನ್ ಅವರನ್ನು ಔಟ್ ಮಾಡಿದ್ದರು. ನಿಯಮದ ಪ್ರಕಾರ ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಈಗ ಅದನ್ನು ನಕಾರಾತ್ಮಕವಾಗಿ ನೋಡಲಾಗುತ್ತಿದೆ. ಅಲ್ಲಿ ವಿನೂ ಮಂಕಡ್ ಅವರ ಹೆಸರನ್ನಷ್ಟೇ ಎಳೆದು ತರಲಾಗಿದೆಯೇ ಹೊರತು ಅಂದು ತಪ್ಪೆಸಗಿ ಔಟಾದವರ ಹೆಸರಿನ ಪ್ರಸ್ತಾಪವೇ ಇಲ್ಲ ಎಂದು ವೆಬ್‌ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಕಳೆದ ಆವೃತ್ತಿಯಲ್ಲಿ ಜೋಸ್ ಬಟ್ಲರ್ ಅವರನ್ನು ರವಿಚಂದ್ರನ್ ಅಶ್ವಿನ್ ‘ಮಂಕಡಿಂಗ್’ ಔಟ್ ಮಾಡಿದ್ದರು. ಇತ್ತೀಚೆಗೆ ಇದನ್ನು ಪ್ರಸ್ತಾಪಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಹಾಗೆ ಮಾಡುವುದು ಕ್ರೀಡಾಸ್ಫೂರ್ತಿಗೆ ವಿರುದ್ಧವಾದುದು ಎಂದು ಹೇಳಿದ್ದರು.
‘ಐಸಿಸಿ ಮತ್ತು ಎಂಸಿಸಿ ಇದನ್ನು ಕೇವಲ ರನ್ಔಟ್ ಎಂದು ಹೇಳುತ್ತದೆ. ಹೀಗಿರುವಾಗ ಮಂಕಡಿಂಗ್ ಎಂಬ ಪದದ ಬಳಕೆ ಯಾಕೆ ಬೇಕು’ ಎಂದು ಕಾರ್ತಿಕ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.