ನವದೆಹಲಿ: ಹೋದ ವರ್ಷದ ರಣಜಿ ಟ್ರೋಫಿ ಟೂರ್ನಿಯಲ್ಲಿ ರನ್ ಹೊಳೆ ಹರಿಸಿದ್ದ ಧ್ರುವ ಶೋರೆ ಮತ್ತು ಅನುಭವಿ ಬ್ಯಾಟರ್ ನಿತೀಶ್ ರಾಣಾ ಅವರು ದೆಹಲಿ ತಂಡವನ್ನು ತೊರೆಯಲು ಸಜ್ಜಾಗಿದ್ದಾರೆ.
ಈ ಸಲದ ದೇಶಿ ಕ್ರಿಕೆಟ್ ಋತುವಿನಲ್ಲಿ ಬೇರೆ ರಾಜ್ಯದ ತಂಡ ಸೇರಿಕೊಳ್ಳಲು ಸಜ್ಜಾಗಿರುವ ಇಬ್ಬರೂ ಆಟಗಾರರು ತಮ್ಮ ತವರು ದೆಹಲಿ ಡಿಸ್ಟ್ರಿಕ್ಟ್ಸ್ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯಿಂದ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.
‘ಧ್ರುವ ಮತ್ತು ನಿತೀಶ್ ಅವರು ಎನ್‌ಒಸಿ ಕೇಳಿದ್ದಾರೆ. ಅವರು ದೆಹಲಿ ತಂಡ ತೊರೆಯಲು ಇಚ್ಛಿಸಿದ್ದಾರೆ. ಅವರೊಂದಿಗೆ ನಾವು ದೀರ್ಘ ಚರ್ಚೆ ನಡೆಸಿದ್ದೇವೆ. ಅವರಂತಹ ಅನುಭವಿ ಆಟಗಾರರನ್ನು ಬಿಟ್ಟುಕೊಡಲು ಸಂಸ್ಥೆಗೆ ಮನಸ್ಸಿಲ್ಲ. ಅವರ ಮನವೊಲಿಸಲು ಪ್ರಯತ್ನ ಮಾಡಿದ್ದೇವೆ. ನಿರ್ಧಾರ ಅವರಿಗೇ ಬಿಟ್ಟಿದ್ದು‘ ಎಂದು ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್ ಮನಚಂದಾ ಶುಕ್ರವಾರ ತಿಳಿಸಿದ್ದಾರೆ.
ಹೋದ ಋತುವಿನವರೆಗೂ ನಿಗದಿಯ ಓವರ್‌ಗಳ ಕ್ರಿಕೆಟ್ ತಂಡಕ್ಕೆ ರಾಣಾ ನಾಯಕರಾಗಿದ್ದರು. ಆದರೆ ಕೇವಲ ಒಂದು ಋತುವಿನಲ್ಲಿ ಆಡಿರುವ ಯಶ್ ಧುಳ್ ಅವರನ್ನು ನಾಯಕನ ಸ್ಥಾನಕ್ಕೇರಿಸಿದ್ದರಿಂದ ರಾಣಾ ಅಸಮಾಧಾನಗೊಂಡಿದ್ದಾರೆನ್ನಲಾಗಿದೆ. ಅಲ್ಲದೇ ರಾಣಾ ಅವರು ತಮ್ಮ ತಂಡದ ಕೆಲವು ಆಟಗಾರರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವುದು ಈಚೆಗೆ ಸುದ್ದಿಯಾಗಿತ್ತು. ಅದರಲ್ಲಿ ಪ್ರಮುಖವಾಗಿ ಆಲ್‌ರೌಂಡರ್ ಹೃತಿಕ್ ಶೋಕೀನ್ ಕೂಡ ಒಬ್ಬರು. ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರು.
ಹೋದ ಋತುವಿನಲ್ಲಿ ದೆಹಲಿ ತಂಡವು ನಾಕೌಟ್ ಹಂತಕ್ಕೂ ಅರ್ಹತೆ ಪಡೆದಿರಲಿಲ್ಲ. ಆದರೆ ಆ ಟೂರ್ನಿಯಲ್ಲಿ ಧ್ರುವ ಶೋರೆ 859 ರನ್ ಪೇರಿಸಿದ್ದರು. ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ಮಯಂಕ್ ಅಗರವಾಲ್ (990), ಅರ್ಪಿತ್ ವಸಾವಡಾ (907) ಮತ್ತು ಅನುಸ್ಟುಪ್ ಮಜುಂದಾರ್ (867) ಮೊದಲ ಮೂರು ಸ್ಥಾನಗಳಲ್ಲಿದ್ದರು.
ಮುಂಬರುವ ರಣಜಿ ಟೂರ್ನಿಯಲ್ಲಿ ಬ್ಯಾಟರ್ ಹಿಮ್ಮತ್ ಸಿಂಗ್ ಅವರು ದೆಹಲಿ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.