ಹುಬ್ಬಳ್ಳಿ: ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ಮತ್ತು ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಸ್‌ಸಿ) ‘ಬಿ’ ತಂಡಗಳು, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಎರಡನೇ ಡಿವಿಷನ್ ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯಗಳಲ್ಲಿ ಗೆಲುವು ಸಾಧಿಸಿದವು.
ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಚ್‌ಎಸ್‌ಸಿ ತಂಡ 46.1 ಓವರ್‌ಗಳಲ್ಲಿ 214 ರನ್ ಕಲೆಹಾಕಿತ್ತು. ಇಮಾಮ್ ಜಾಫರ್ ರಾಮದುರ್ಗ (78), ಸತೀಶ ನಾಯ್ಕರ (36) ಅವರ ಉತ್ತಮ ಬ್ಯಾಟಿಂಗ್ ಇದಕ್ಕೆ ಕಾರಣವಾಯಿತು. ಎದುರಾಳಿ ಧಾರವಾಡದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ ‘ಬಿ’ ತಂಡ 29.5 ಓವರ್‌ಗಳಲ್ಲಿ 107 ರನ್ ಕಲೆಹಾಕುವಷ್ಟರಲ್ಲಿ ತನ್ನ ಹೋರಾಟ ಮುಗಿಸಿತು. ಎಚ್‌ಎಸ್‌ಸಿ ತಂಡದ ಪಿ. ಶಿವನಗೌಡ ಮತ್ತು ಸುಜಯ ಹೊನ್ನಂಗಿ ತಲಾ ಮೂರು ವಿಕೆಟ್ ಕಬಳಿಸಿ ತಂಡಕ್ಕೆ 107 ರನ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು.
ರೈಲ್ವೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗದುಗಿನ ಜನೋಪಂಥರ್ ಕ್ರಿಕೆಟ್ ಅಕಾಡೆಮಿ ಎದುರು ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ‘ಬಿ’ ತಂಡ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿತು.
ಬೆಳಗಾವಿ ತಂಡದ ಅಮರ ಗಾಲೆ ನಾಲ್ಕು, ಶುಭಂ ಗೋಂಡ್ಕರ್ ಮತ್ತು ರೋಹಿತ ಧವಳೆ ತಲಾ ಎರಡು ವಿಕೆಟ್ ಕಬಳಿಸಿ ಗದುಗಿನ ತಂಡವನ್ನು 33.4 ಓವರ್‌ಗಳಲ್ಲಿ 156 ರನ್‌ಗೆ ಕಟ್ಟಿ ಹಾಕಿದರು. ಈ ಸುಲಭ ಗುರಿಯನ್ನು ಕುಂದಾನಗರಿಯ ತಂಡ 24.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ತಲುಪಿತು. ವೆಂಕಟೇಶ ಶಿರಾಳಕರ (84 ರನ್) ಮತ್ತು ವಿರಾಜ್ (42 ರನ್) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.