ನೈರೋಬಿ: ಕನ್ನಡಿಗ ದೊಡ್ಡ ಗಣೇಶ್ ಅವರನ್ನು ಕೇನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
2026ರ ಟಿ20 ವಿಶ್ವಕಪ್ ಕಪ್ ಟೂರ್ನಿಯ ಆಫ್ರಿಕಾ ಮಟ್ಟದ ಅರ್ಹತಾ ಸುತ್ತಿನಲ್ಲಿ ಕೇನ್ಯಾ ತಂಡವು ಆಡುತ್ತಿದೆ. 51 ವರ್ಷದ ಗಣೇಶ್ ಅವರು ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ದೊಡ್ಡ ಗಣೇಶ್ ಅವರು ಭಾರತ ತಂಡವನ್ನು ನಾಲ್ಕು ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯದಲ್ಲಿ ಪ್ರತಿನಿಧಿಸಿದ್ದಾರೆ. ಕರ್ನಾಟಕ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದವರು ದೊಡ್ಡಗಣೇಶ್.
ಕೇನ್ಯಾ ತಂಡವು 1996 ರಿಂದ 2011ರವರೆಗೆ ಐದು ವಿಶ್ವಕಪ್ ಟೂರ್ನಿಗಳಲ್ಲಿ ಆಡಿತ್ತು. 2003ರ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಕೂಡ ಪ್ರವೇಶಿಸಿತ್ತು. ಆಗ ಭಾರತದ ಸಂದೀಪ್ ಪಾಟೀಲರು ಮುಖ್ಯ ಕೋಚ್ ಆಗಿದ್ದರು. ಕೇನ್ಯಾ ತಂಡವು 2007ರ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿತ್ತು. ಅದರ ನಂತರದ ವರ್ಷಗಳಲ್ಲಿ ಕೇನ್ಯಾ ತಂಡದ ಸಾಮರ್ಥ್ಯ ಇಳಿಮುಖವಾಗಿದೆ.
ದೊಡ್ಡ ಗಣೇಶ್ ಅವರಿಗೆ ಸಹಾಯಕ ಕೋಚ್‌ಗಳಾಗಿ ಕೇನ್ಯಾದ ಮಾಜಿ ಕ್ರಿಕೆಟಿಗರಾದ ಲೆಮೆಕ್ ಒನ್ಯಾಂಗೊ ಮತ್ತು ಜೋಸೆಫ್ ಅಂಗಾರಾ ಅವರು ನೇಮಕವಾಗಿದ್ಧಾರೆ.
‘ಈ ಅವಕಾಶ ದೊರೆತಿರುವುದು ಸಂತಸ ತಂದಿದೆ. ಕೇನ್ಯಾ ತಂಡದಲ್ಲಿ ಉತ್ತಮ ಪ್ರತಿಭಾವಂತ ಆಟಗಾರರು ಇದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರಿಗೆ ಉತ್ತಮ ಮಾರ್ಗದರ್ಶನ ನೀಡುವುದು ನನ್ನ ಪ್ರಮುಖ ಆದ್ಯತೆ’ ಎಂದು ದೊಡ್ಡಗಣೇಶ್ ಸಂತಸ ವ್ಯಕ್ತಪಡಿಸಿದ್ದಾರೆ.
‘1998–99ರಲ್ಲಿ ರಣಜಿ ಟ್ರೋಫಿ ಜಯಿಸಿದ್ದೆವು. ಆಗ ರಣಜಿ ಚಾಂಪಿಯನ್ ತಂಡಕ್ಕೆ ಭಾರತಕ್ಕೆ ಪ್ರವಾಸ ಮಾಡುವ ತಂಡದೊಂದಿಗೆ ಆಡುವ ಅವಕಾಶ ಸಿಗುತ್ತಿತ್ತು. ಅಂತಹದೊಂದು ಅವಕಾಶ ನಮಗೂ ಸಿಕ್ಕಿತ್ತು. ಕೇನ್ಯಾದ ಎದುರು ಆಡಿದ್ದೆವು. ನಾನು ಉತ್ತಮವಾಗಿ ಬೌಲಿಂಗ್ ಮಾಡಿದ್ದೆ. ಆ ವರ್ಚಸ್ಸು ಇವತ್ತು ಫಲ ನೀಡಿದೆ. ಇದಕ್ಕಾಗಿ ನಾನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಮಾಜಿ ಅಧ್ಯಕ್ಷರಾದ ಬ್ರಿಜೇಶ್ ಪಟೇಲ್ ಅವರು ಕೊಟ್ಟ ಅವಕಾಶವೇ ಕಾರಣ’ ಎಂದು ದೊಡ್ಡ ಗಣೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.