ಮುಂಬೈ: ದೇಶಿ ಕ್ರಿಕೆಟ್ ರೂಪುರೇಷೆ ಬದಲಾಯಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಾಗಿದೆ.
ಮುಂಬರುವ ದೇಶಿ ಋತುವಿನಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಎರಡು ಭಾಗಗಳಲ್ಲಿ ನಡೆಸುವ ಸಾಧ್ಯತೆ ಇದೆ. ಈ ಕುರಿತು ಅಪೆಕ್ಸ್ ಕಮಿಟಿಗೆ ಪ್ರಸ್ತಾವ ಸಲ್ಲಿಸಲಾಗಿದೆ.
ಹೊಸ ಮಾದರಿಯಲ್ಲಿ ರಣಜಿ ಟ್ರೋಫಿ ಟೂರ್ನಿಯ ಐದು ಲೀಗ್ ಪಂದ್ಯಗಳ ನಂತರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿ ಟೂರ್ನಿ ನಡೆಯಲಿವೆ. ರಣಜಿ ಟೂರ್ನಿಯ ಉಳಿದ ಎರಡು ಲೀಗ್ ಪಂದ್ಯಗಳು, ನಾಕ್‌ಔಟ್ ಹಂತದ ಪಂದ್ಯಗಳನ್ನು ಸೀಮಿತ ಓವರ್‌ಗಳ ಟೂರ್ನಿಗಳ ನಂತರ ಆಡಿಸಲಾಗುವುದು.
ರಣಜಿ ಋತುವಿನ ಪಂದ್ಯಗಳು ನಡೆಯುವ ಅವಧಿಯಲ್ಲಿ ದೇಶದ ಕೆಲವು ಭಾಗಗಳಲ್ಲಿ ಪ್ರತಿಕೂಲ ವಾತಾವರಣದ ಸಮಸ್ಯೆ ಇರುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಈ ಮಾದರಿಯ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಇದಲ್ಲದೇ ಪಂದ್ಯಗಳ ನಡುವಿನ ದಿನಗಳನ್ನು ಹೆಚ್ಚಿಸುವಕುರಿತು ಯೋಚಿಸಲಾಗಿದೆ. ಇದರಿಂದ ಆಟಗಾರರು ತಮ್ಮ ಫಿಟ್‌ನೆಸ್ ನಿರ್ವಹಿಸಿಕೊಳ್ಳಲು ನೆರವಾಗಲಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಹೋದ ವರ್ಷ ಪಂದ್ಯದಿಂದ ಪಂದ್ಯಕ್ಕೆ ಮೂರು ದಿನಗಳ ಕಾಲಾವಕಾಶ ಮಾತ್ರ ನೀಡಲಾಗಿತ್ತು. ಅದರಿಂದಾಗಿ ಪ್ರಯಾಣ ಮತ್ತು ಅಭ್ಯಾಸದಲ್ಲಿ ಆಟಗಾರರು ಬಹಳಷ್ಟು ತೊಂದರೆ ಅನುಭವಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.