ADVERTISEMENT

ಸೆ. 5ರಿಂದ ದೇಶಿ ಕ್ರಿಕೆಟ್‌ ಋತು: ದುಲೀಪ್ ಟ್ರೋಫಿಯೊಡನೆ ಆರಂಭ

ಪಿಟಿಐ
Published 8 ಜೂನ್ 2024, 0:20 IST
Last Updated 8 ಜೂನ್ 2024, 0:20 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಸೆಪ್ಟೆಂಬರ್‌ 5ರಂದು ಅನಂತಪುರದಲ್ಲಿ ದುಲೀಪ್‌ ಟ್ರೋಫಿ ಟೂರ್ನಿಯ ಆರಂಭದೊಡನೆ, 2024–25ನೇ ಸಾಲಿನ ದೇಶಿ ಕ್ರಿಕೆಟ್‌ ಋತು ಶುರುವಾಗಲಿದೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಗುರುವಾರ ವೇಳಾಪಟ್ಟಿಯನ್ನು ಪ್ರಕಟಿಸಿತು.

ಸೀನಿಯರ್‌ ಆಯ್ಕೆ ಸಮಿತಿ ಆಯ್ಕೆ ಮಾಡುವ ನಾಲ್ಕು ತಂಡಗಳು ಸೆ. 5 ರಿಂದ 22ರವರೆಗೆ ನಡೆಯುವ ದುಲೀಪ್‌ ಟ್ರೋಫಿಯಲ್ಲಿ ಭಾಗವಹಿಸಲಿವೆ. ಇದರ ನಂತರ ಇರಾನಿ ಕಪ್ ಮತ್ತು ರಣಜಿ ಟ್ರೋಫಿ ಪಂದ್ಯಗಳು ನಡೆಯಲಿವೆ. ಮೊದಲ ಹಂತದಲ್ಲಿ ರಣಜಿ ಟ್ರೋಫಿಯ ಐದು ಲೀಗ್‌ ಪಂದ್ಯಗಳು ನಡೆಯಲಿವೆ.

ADVERTISEMENT

ಆಟಗಾರರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ವೇಳಾಪಟ್ಟಿ ರೂಪಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದರು.

ರಣಜಿ ಟ್ರೋಫಿಯಲ್ಲಿ ಕರ್ನಾಟಕ ಎಲೈಟ್‌ ‘ಸಿ’ ಗುಂಪಿನಲ್ಲಿದೆ. ಈ ಮಧ್ಯಪ್ರದೇಶ, ಹರಿಯಾಣ, ಬಂಗಾಳ, ಕೇರಳ, ಉತ್ತರ ಪ್ರದೇಶ, ಪಂಜಾಬ್ ಮತ್ತು ಬಿಹಾರ ಗುಂಪಿನಲ್ಲಿರುವ ಇತರ ತಂಡಗಳು.

ಸೈಯ್ಯದ್‌ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕವು ‘ಬಿ’ ಗುಂಪಿನಲ್ಲಿದೆ. ಬರೋಡ, ಗುಜರಾತ್‌, ಸೌರಾಷ್ಟ್ರ, ತಮಿಳುನಾಡು, ಉತ್ತರಾಖಂಡ, ತ್ರಿಪುರ, ಸಿಕ್ಕಿಂ ‘ಬಿ’ ಗುಂಪಿನಲ್ಲಿರುವ ಇತರ ತಂಡಗಳು.

ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಜ್ಯ ತಂಡ ‘ಸಿ’ ಗುಂಪಿನಲ್ಲಿದ್ದು, ಮುಂಬೈ, ಹೈದರಾಬಾದ್, ಸೌರಾಷ್ಟ್ರ, ಪಂಜಾಬ್‌, ಪುದುಚೇರಿ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ ಕೂಡ ಈ ಗುಂಪಿನಲ್ಲಿವೆ.

ಸಿ.ಕೆ.ನಾಯ್ಡು ಟ್ರೊಫಿಗೆ ಟಾಸ್‌ ಇಲ್ಲ:

ಮಂಡಳಿಯು ಮಹತ್ವದ ನಿರ್ಧಾರವೊಂದರಲ್ಲಿ ಸಿ.ಕೆ.ನಾಯ್ಡು ಟ್ರೋಫಿ ಪಂದ್ಯಗಳಿಗೆ ಟಾಸ್‌ ರದ್ದುಗೊಳಿಸಲು ನಿರ್ಧರಿಸಿದೆ. ಇದರ ಬದಲು ಪ್ರವಾಸಿ ತಂಡಗಳಿಗೆ ಮೊದಲು ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆ ಮಾಡುವ ಅವಕಾಶ ನೀಡಲಾಗುತ್ತದೆ.

ವೇಳಾಪಟ್ಟಿ:

* ದುಲೀಪ್‌ ಟ್ರೋಫಿ: ಸೆಪ್ಟೆಂಬರ್ 5 ರಿಂದ22

* ಇರಾನಿ ಕಪ್‌: ಅಕ್ಟೋಬರ್ 1 ರಿಂದ5.

* ರಣಜಿ ಟ್ರೋಫಿ: ಅ.11 ರಿಂದ ಫೆ. 2, 2025 (ಲೀಗ್‌ ಹಂತ). ಫೆ. 8 ರಿಂದ ಮಾರ್ಚ್‌ 2 (ನಾಕೌಟ್‌)

* ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ನ. 23 ರಿಂದ ಡಿ. 5 (ಗುಂಪು ಹಂತ), ಡಿ 9 ರಿಂದ 15 (ನಾಕೌಟ್‌)

* ವಿಜಯ್ ಹಜಾರೆ ಟ್ರೋಫಿ: ಡಿ 21 ರಿಂದ ಜ.5, 2025 (ಗುಂಪು ಹಂತ). ಜ. 9 ರಿಂದ 18 (ನಾಕೌಟ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.