ರಾಂಚಿ: ಭಾನುವಾರದ ಆಟದಲ್ಲಿ ಎರಡು ಅಮೋಘ ಕ್ಯಾಚ್‌ಗಳನ್ನು ಪಡೆದ ಭಾರತದ ಸರ್ಫರಾಜ್ ಖಾನ್ ಮಿಂಚಿದರು. ಆದರೆ ಕ್ಲೋಸ್ ಇನ್ ಫೀಲ್ಡಿಂಗ್ ಪೊಸಿಷನ್‌ನಲ್ಲಿ ನಿಂತ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದ ಕಾರಣಕ್ಕೆ ನಾಯಕ ರೋಹಿತ್ ಶರ್ಮಾ ಅವರ ಕೆಂಗಣ್ಣಿಗೆ ಗುರಿಯಾದರು.
‘ಏ ತಮ್ಮಾ; ಹೀರೊ ತರ ವರ್ತಿಸಬೇಡ. ಹೆಲ್ಮೆಟ್ ಹಾಕಿಕೊ‘ ಎಂದು ರೋಹಿತ್ ಅವರು ಸರ್ಫರಾಜ್ ಅವರನ್ನು ಗದರಿದ್ದು ಸ್ಟಂಪ್ ಮೈಕಿನಲ್ಲಿ ದಾಖಲಾಗಿದೆ. ಆಗ ತಂಡದ ಡ್ರೆಸ್ಸಿಂಗ್ ರೂಮ್‌ನಿಂದ ಹೆಲ್ಮೆಟ್ ತರಿಸಿ ಧರಿಸಿಕೊಂಡ ಸರ್ಫರಾಜ್ ಫೀಲ್ಡಿಂಗ್ ಮಾಡಿದರು.
ಈ ಸನ್ನಿವೇಶವನ್ನು ದೆಹಲಿಯ ಸಂಚಾರಿ ಪೊಲೀಸರು ಹೆಲ್ಮೆಟ್ ಮಹತ್ವದ ಕುರಿತು ಜಾಗೃತಿ ಮೂಡಿಸುವ ಜಾಹೀರಾತು ನಿರ್ಮಿಸಿದ್ದಾರೆ. ‘ದ್ವಿಚಕ್ರ ವಾಹನ ಸವಾರರು ಹೀರೊ ತರ ವರ್ತಿಸಬಾರದು. ಹೆಲ್ಮೆಟ್ ಹಾಕಿಕೋಬೇಕು’ ಎಂಬ ಸಂದೇಶದ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗುತ್ತಿದೆ.
ಕುಂಬ್ಳೆ ದಾಖಲೆ ಸರಿಗಟ್ಟಿದ ಅಶ್ವಿನ್
ಟೆಸ್ಟ್ ಕ್ರಿಕೆಟ್‌ನಲ್ಲಿ 35ನೇ ಬಾರಿಗೆ ಐದು ವಿಕೆಟ್ ಗೊಂಚಲು ಗಳಿಸಿದ ಅಶ್ವಿನ್ ಅವರು ಅನಿಲ್ ಕುಂಬ್ಳೆ ದಾಖಲೆಯನ್ನು ಸಮಗಟ್ಟಿದರು.
ಲೆಗ್‌ಸ್ಪಿನ್ನರ್ ಕುಂಬ್ಳೆ 132 ಪಂದ್ಯಗಳಲ್ಲಿ 35 ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದರು. ಅಶ್ವಿನ್ 99 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 67 ಬಾರಿ ಈ ಐದರ ಗೊಂಚಲು ಗಳಿಸಿದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್ (37) ಮತ್ತು ನ್ಯೂಜಿಲೆಂಡ್‌ನ ರಿಚರ್ಡ್ ಹ್ಯಾಡ್ಲಿ (36) ಅವರ ನಂತರದ ಸ್ಥಾನದಲ್ಲಿ ಅಶ್ವಿನ್ ಇದ್ದಾರೆ.
‘ಅಶ್ವಿನ್ ನೂರನೇ ಟೆಸ್ಟ್
ನಾಯಕತ್ವ ವಹಿಸಲಿ’ ಧರ್ಮಶಾಲಾದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರ ವೃತ್ತಿಜೀವನದ ನೂರನೇ ಪಂದ್ಯವಾಗಿದೆ. ಆ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಗೌರವವನ್ನು ಅಶ್ವಿನ್ ಅವರಿಗೆ ರೋಹಿತ್ ಶರ್ಮಾ ನೀಡಬೇಕು ಎಂದು ವೀಕ್ಷಕ ವಿವರಣೆಗಾರ ಸುನಿಲ್ ಗಾವಸ್ಕರ್ ಸಲಹೆ ನೀಡಿದ್ದಾರೆ.
‘ಧರ್ಮಶಾಲಾದಲ್ಲಿ ಸರಣಿಯ ಐದನೇ ಪಂದ್ಯವು ನಡೆಯಲಿದೆ. ನಾಯಕ ರೋಹಿತ್ ಶರ್ಮಾ ಅವರು ಅಶ್ವಿನ್‌ಗೆ ತಂಡವನ್ನು ಮುನ್ನಡೆಸುವ ಅವಕಾಶವನ್ನು ನೀಡಬೇಕು ಅದೊಂದು ದೊಡ್ಡ ಗೌರವ ನೀಡಿದಂತಾಗಲಿದೆ’ ಎಂದು ಗಾವಸ್ಕರ್ ಜಿಯೊ ಸಿನೆಮಾದೊಂದಿಗೆ ಮಾತನಾಡುವಾಗ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.