ನವದೆಹಲಿ: ‘ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನಕ್ಕೆ ಇನ್ನು ಮುಂದೆ ಅರ್ಜಿ ಸಲ್ಲಿಸಬೇಕು ಎಂದು ಯಾರೂ ಭಾವಿಸಬೇಡಿ. ಸದ್ಯ ರಾಹುಲ್ ದ್ರಾವಿಡ್ ಅರ್ಜಿ ಸಲ್ಲಿಸುವುದು ಕೇವಲ ಔಪಚಾರಿಕವಷ್ಟೆ’... ಇವು ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಆಡಿದ ಮಾತುಗಳು.
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕನ್ನಡಿಗ, ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಆಯ್ಕೆ ಬಹುತೇಕ ಖಚಿತಗೊಂಡಿದೆ. ಹೆಡ್ ಕೋಚ್ ಸ್ಥಾನಕ್ಕಾಗಿ ರಾಹುಲ್ ದ್ರಾವಿಡ್ ಮಂಗಳವಾರ ಬಿಸಿಸಿಐಗೆ ಅರ್ಜಿ ಸಲ್ಲಿಸಿದ್ದಾರೆ. ಈ ನಿರ್ಧಾರವನ್ನು ಸುನಿಲ್ ಗವಾಸ್ಕರ್ ಸ್ವಾಗತಿಸಿದ್ದಾರೆ.
‘ಕೋಚ್ ಸ್ಥಾನಕ್ಕಾಗಿ ಬೇರೆಯವರು ಇನ್ನು ಮುಂದೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ದ್ರಾವಿಡ್ ಅವರು ಅಂಡರ್-19 ತಂಡವನ್ನು ಮುನ್ನಡೆಸಿದ ರೀತಿಯನ್ನು ಗಮನಿಸಿದರೆ ಮೈದಾನದ ಒಳಗೆ ಮತ್ತು ಹೊರಗೆ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರಿಗೆ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯವಿದೆ. ಹಾಗಾಗಿ ಅವರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಕೇವಲ ಔಪಚಾರಿಕ ಎಂದು ನಾನು ಭಾವಿಸುತ್ತೇನೆ’ ಎಂದು ಗವಾಸ್ಕರ್ ತಿಳಿಸಿದ್ದಾರೆ.
ದುಬೈಯಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಫೈನಲ್ ಪಂದ್ಯದ ಸಂದರ್ಭ ದ್ರಾವಿಡ್ ಬಿಸಿಸಿಐ ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಟಿ–20 ವಿಶ್ವಕಪ್ ಮುಗಿದ ಬಳಿಕ ಹಾಲಿ ಹೆಡ್ ಕೋಚ್ ರವಿಶಾಸ್ತ್ರಿ ಅವರ ಅವಧಿ ಕೊನೆಗೊಳ್ಳಲಿದ್ದು, ಆ ಸ್ಥಾನ ತುಂಬುವಂತೆ ಸೌರವ್ ಗಂಗೂಲಿ ಮತ್ತು ಜಯ್ ಶಾ ಅವರು ರಾಹುಲ್ ದ್ರಾವಿಡ್ ಅವರ ಮನವೊಲಿಸಿದ್ದಾರೆ’ ಎಂದು ತಿಳಿದು ಬಂದಿದೆ.
ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಹೆಡ್ ಕೋಚ್ ಆದ ಬಳಿಕ ವಿವಿಎಸ್ ಲಕ್ಷ್ಮಣ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.