ನಾರ್ತ್ ಸೌಂಡ್, ಆ್ಯಂಟಿಗಾ: 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿ ಇತಿಹಾಸ ಬರೆದಿರುವ ಅಫ್ಗಾನಿಸ್ತಾನ ತಂಡವು ಮಂಗಳವಾರ ಮತ್ತೊಂದು ಸಾಧನೆಯ ತುಡಿತದಲ್ಲಿದೆ. ನಾಲ್ಕರ ಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್‌ಅನ್ನು ಎದುರಿಸಲಿದ್ದು ಗೆಲುವಿನ ವಿಶ್ವಾಸದಲ್ಲಿದೆ.
ವೀಸಾ ಸಂಬಂಧಿತ ಸಮಸ್ಯೆಯಿಂದಾಗಿಕಣಿವೆ ದೇಶದ ತಂಡವು ಆತಿಥೇಯ ಕೆರಿಬಿಯನ್ ನಾಡಿಗೆ ತಡವಾಗಿ ಆಗಮಿಸಿತ್ತು. ಇದರಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಂಡದ ಗುಂಪು ಹಂತದ ಪಂದ್ಯಗಳನ್ನು ಮರುನಿಗದಿ ಮಾಡಬೇಕಾಯಿತು. ಆದರೆ ಅಫ್ಘಾನಿಸ್ತಾನವು ಅಮೋಘ ಸಾಧನೆಯೊಂದಿಗೆ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ.
ಕ್ರಿಕೆಟ್‌ನಿಂದ ಬಹುದೂರವಿರುವ ಮತ್ತು ಸಮಸ್ಯೆಗಳ ಸುಳಿಗೆ ಒಗ್ಗಿಕೊಂಡಿರುವ ದೇಶದ ತಂಡವು ಟೂರ್ನಿಯಲ್ಲಿ ಇನ್ನಷ್ಟು ಉತ್ತಮ ಸಾಧನೆಯ ನಿರೀಕ್ಷೆಯಲ್ಲಿದೆ.
ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯಲ್ಲಿ ಇಂಗ್ಲೆಂಡ್‌ಅನ್ನು ಮಣಿಸಿ ಮೊದಲ ಬಾರಿ ಟೂರ್ನಿಯ ಫೈನಲ್ ತಲುಪುವ ಉತ್ಸಾಹ ಅಫ್ಗಾನಿಸ್ತಾನ ತಂಡದ್ದು.
ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೀಲಂಕಾತಂಡವನ್ನು ನಾಲ್ಕು ರನ್‌ಗಳಿಂದ ಅಫ್ಗಾನಿಸ್ತಾನ ಸೋಲಿಸಿತ್ತು.
ಅಫ್ಗಾನಿಸ್ತಾನ ತಂಡಕ್ಕೆ ಇಂಗ್ಲೆಂಡ್‌ನ ಬ್ಯಾಟಿಂಗ್ ಪಡೆ ಬಹುದೊಡ್ಡ ಸವಾಲು ಒಡ್ಡಬಹುದು. ಆಲ್‌ರೌಂಡರ್ ಜಾಕೊಬ್ ಬೆಥೆಲ್ ಆ ತಂಡದ ಶಕ್ತಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 42 ಎಸೆತಗಳಲ್ಲಿ 88 ರನ್ ಸಿಡಿಸಿದ್ದ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಫ್ಗಾನಿಸ್ತಾನ ಎದುರಿನ ಪಂದ್ಯದಲ್ಲೂ ಇಂಗ್ಲೆಂಡ್ ಉತ್ತಮ ಲಯವನ್ನು ಮುಂದುವರಿಸುವ ಛಲದಲ್ಲಿದೆ.
ಬುಧವಾರ ನಡೆಯುವ ಮತ್ತೊಂದು ಸೆಮಿಫೈನಲ್ ಹಣಾಹಣಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.