ADVERTISEMENT

ಎಲ್ಲ ಆಟಗಾರರಿಗೂ ಅವಕಾಶಕ್ಕೆ ಆದ್ಯತೆ: ದ್ರಾವಿಡ್ ಅಭಿಪ್ರಾಯ

ಪಿಟಿಐ
Published 11 ಜೂನ್ 2021, 12:15 IST
Last Updated 11 ಜೂನ್ 2021, 12:15 IST
ರಾಹುಲ್‌ ದ್ರಾವಿಡ್‌ –ಪ್ರಜಾವಾಣಿ ಚಿತ್ರ
ರಾಹುಲ್‌ ದ್ರಾವಿಡ್‌ –ಪ್ರಜಾವಾಣಿ ಚಿತ್ರ   

ನವದೆಹಲಿ: ಭಾರತ ‘ಎ’ ಮತ್ತು 19 ವರ್ಷದೊಳಗಿನ ಆಟಗಾರರ ಪ್ರತಿಭೆಗೆ ಸಾಣೆ ಹಿಡಿದು ಯುವ ಪಡೆಯನ್ನು ಕಟ್ಟುವಲ್ಲಿ ಯಶಸ್ವಿಯಾಗಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್‌ ‘ತಂಡದೊಂದಿಗಿದ್ದ ಎಲ್ಲ ಆಟಗಾರರಿಗೂ ಆಡಲು ಅವಕಾಶ ನೀಡುವುದು ನನ್ನ ಆದ್ಯತೆಯಾಗಿತ್ತು’ ಎಂದು ಹೇಳಿದ್ದಾರೆ.

ಮೋಹಕ ಶೈಲಿಯ ಬ್ಯಾಟ್ಸ್‌ಮನ್‌, ‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಶಿಖರ್ ಧವನ್ ನಾಯಕತ್ವದ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮುಂದಿನ ತಿಂಗಳು ಪ್ರವಾಸ ಕೈಗೊಳ್ಳುವ ತಂಡ ಶ್ರೀಲಂಕಾದಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ.

‘ತಂಡದೊಂದಿಗೆ ಪ್ರವಾಸ ಕೈಗೊಂಡು ಒಂದು ಪಂದ್ಯದಲ್ಲೂ ಆಡದೆ ವಾಪಸಾದರೆ ಮನಸ್ಸಿಗಾಗುವ ನೋವು ಹೇಳತೀರದು. ಕ್ರಿಕೆಟ್ ಜೀವನದ ಆರಂಭದ ದಿನಗಳಲ್ಲಿ ನನಗೆ ಇಂಥ ಅನುಭವ ಆಗಿದೆ. ಆದ್ದರಿಂದ ನಾನು ಕೋಚ್ ಆಗಿದ್ದಾಗ ತಂಡದಲ್ಲಿದ್ದ ಪ್ರತಿಯೊಬ್ಬರೂ ಕನಿಷ್ಠ ಒಂದು ಪಂದ್ಯವನ್ನಾದರೂ ಆಡದೆ ವಾಪಸ್ ಬಂದಿಲ್ಲ’ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೊದ ‘ದಿ ಕ್ರಿಕೆಟ್ ಮಂತ್ಲಿ’ ಕಾರ್ಯಕ್ರಮದಲ್ಲಿ ದ್ರಾವಿಡ್ ಹೇಳಿದ್ದಾರೆ.

ADVERTISEMENT

‘ದೇಶಿ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದರೂ ವಿದೇಶ ಪ್ರವಾಸದಲ್ಲಿ ಅವಕಾಶ ಸಿಗದೆ ವಾಪಸಾದರೆ ಪ್ರತಿಭೆ ಬೆಳಗಲು ಸಾಧ್ಯವಾಗದ ಬೇಸರ ಕಾಡುತ್ತದೆ. ಆಯ್ಕೆ ಸಮಿತಿಯ ಗಮನ ಸೆಳೆಯಲು ಮತ್ತೊಮ್ಮೆ ದೇಶಿ ಮಟ್ಟದಲ್ಲಿ ಮಿಂಚುವ ಒತ್ತಡ ಉಂಟಾಗುತ್ತದೆ. ಅದು ಸಾಧ್ಯವಾಗಬೇಕೆಂದೇನೂ ಇಲ್ಲ. ಆದ್ದರಿಂದ ಮತ್ತೆ ಅವಕಾಶ ಸಿಗುವ ಸಾಧ್ಯತೆಯೂ ಕಡಿಮೆ ಇರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

‘15 ಮಂದಿ ಆಟಗಾರರನ್ನು ಒಂದು ತಂಡವಾಗಿ ಕಾಣಬೇಕು. 11 ಮಂದಿಗೆ ಸಹಕಾರಿಯಾಗಿ ಇತರ ನಾಲ್ವರು ಇದ್ದಾರೆ ಎಂದು ತಿಳಿಯುವುದು ಸರಿಯಲ್ಲ. ಆದ್ದರಿಂದ ಎಲ್ಲ 11 ಮಂದಿಗೂ ಆಡಲು ಅವಕಾಶ ನೀಡುವುದು ತಂಡದ ದೃಷ್ಟಿಯಿಂದ ಒಳ್ಳೆಯದು’ ಎಂದು ದ್ರಾವಿಡ್‌ ನುಡಿದರು.

‘ಫಿಟ್‌ನೆಸ್‌ಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಿದೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಆಟಗಾರರ ಕಡೆಗೆ ಮತ್ತು ಅವರ ತರಬೇತುದಾರರ ಕಡೆಗೆ ನೋಡುವುದರಿಂದ ಪ್ರಯೋಜನವಿಲ್ಲ. ರಸ್ತೆಯಲ್ಲೋ ಸಮುದ್ರ ಬದಿಯಲ್ಲೋ ಆಡಿದರೆ ಕ್ರಿಕೆಟಿಗನಾಗಲು ಸಾಧ್ಯವಿಲ್ಲ. ಪ್ರತಿಭೆ ಹೊರಸೂಸಬೇಕಾರೆ ಮ್ಯಾಟಿಂಗ್ ಅಥವಾ ಟರ್ಫ್ ವಿಕೆಟ್‌ ಒದಿಗಿಸಬೇಕು ಮತ್ತು ಫಿಟ್‌ನೆಸ್ ಬಗ್ಗೆ ಮಾಹಿತಿ ನೀಡಬೇಕು’ ಎಂದು ಅವರು ಹೇಳಿದರು.

ಭಾವುಕರಾದ ಋತುರಾಜ್‌

ಪುಣೆ: ಮೊದಲ ಬಾರಿಭಾರತ ತಂಡಕ್ಕೆ ಆಯ್ಕೆಯಾಗಿರುವ ಮಹಾರಾಷ್ಟ್ರದ ಋತುರಾಜ್ ಗಾಯಕವಾಡ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದಾಗ ಭಾವುಕರಾದರು. ಯಾವುದೇ ಪರಿಸರಕ್ಕೆ ಬೇಗ ಹೊಂದಿಕೊಳ್ಳುವ ಗುಣವಿದ್ದು ಅದರ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆ ಇದೆ ಎಂದು ಅವರು ಹೇಳಿದರು.

ಜುಲೈ 13ರಿಂದ 25ರ ವರೆಗೆ ಭಾರತ ತಂಡ ಶ್ರೀಲಂಕಾದಲ್ಲಿ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ. 20 ಮಂದಿಯ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು ಇವರಲ್ಲಿ ಆರು ಮಂದಿ ಹೊಸಬರು.

ಬಲಗೈ ಬ್ಯಾಟ್ಸ್‌ಮನ್ ಋತುರಾಜ್ 59 ಲಿಸ್ಟ್‌ ‘ಎ’ ಪಂದ್ಯಗಳನ್ನು ಆಡಿದ್ಉದ 47ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಟಿ20 ಮಾದರಿಯ ಕ್ರಿಕೆಟ್‌ನಲ್ಲಿ 130ಕ್ಕೂ ಅಧಿಕ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ಫಫ್ ಡು ಪ್ಲೆಸಿ ಮುಂತಾದವರೊಂದಿಗೆತಂಡದ ಡ್ರೆಸಿಂಗ್ ಕೊಠಡಿಯಲ್ಲಿ ಕಳೆದ ದಿನಗಳಲ್ಲಿ ಸಾಕಷ್ಟು ಕಲಿಯಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.